ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿಕಾರಿ ವೇಳೆ ಅಜಾಗರುಕತೆಯಿಂದ ಗುಂಡು ಹಾರಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಕುದಿ ಗ್ರಾಮದ ಕೊಂಡಾಡಿಯ ಪ್ರದೀಪ್ (32) ಮತ್ತು ಹಿರಿಯಡ್ಕದ ಗುಡ್ಡೆಯಂಗಡಿಯ ಮನೋಜ್ (25) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 1ರಂದು ಕಣಜಾರು ಗ್ರಾಮದ ಗುರುರಾಜ್ ಮಂಜಿತ್ತಾಯರವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಅಂದು ಬೇಟೆಯ ಸಮಯದಲ್ಲಿ ಗುಂಡು ಸದ್ದು ಕೇಳಿ, ಕಾರಿನ ಗಾಜು ಹಾಗೂ ಮನೆಯ ಬಾಗಿಲಿಗೆ ತಾಗಿತ್ತು.
ಆರೋಪಿಗಳಿಂದ ಪರವಾನಿಗೆ ರಹಿತ ತೋಟೆ ಕೋವಿ, ಏಳು ತೋಟೆಗಳು ಹಾಗೂ ₹40,000 ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹಾಗೂ ಹೆಚ್ಚುವರಿ ಎಸ್‌ಪಿ ಸುಧಾಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹಿರಿಯಡ್ಕ ಉಪನಿರೀಕ್ಷಕ ಪುನೀತ್ ಕುಮಾರ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.