ಹಾಸನ: ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ನಾಲ್ವರಿಗೆ ಗಂಭೀರ ಗಾಯಗೊಂಡಿರುವ ಘಟನೆ ಅರಕಲಗೂಡು ಪಟ್ಟಣದ, ಹೆಂಟಗೆರೆ ವಾರ್ಡ್ ನಂ.17 ರಲ್ಲಿ ಸಂಭವಿಸಿದೆ.
ಗಾಯಗೊಂಡವರು ಅಲೀಂ ಬೇಗಂ (23), ರೋಹಿತ್ ಖಾತನ್ (19), ಇಸ್ತಾರ್ ಉಲ್ಲಾ (23), ಅಹಿಸ್ಲಮ್ (25) ಎಂದು ತಿಳಿದು ಬಂದಿದೆ.
ಹೆಂಟಿಗೆರೆ ಗ್ರಾಮದ ದೊಡ್ಡಗೌಡ ಮನೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ವಾಸವಿದ್ದು ಬೆಳಿಗ್ಗೆ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಇಬ್ಬರು ಕಾರ್ಮಿಕರ ಕೈ ಕಾಲುಗಳು ಸಂಪೂರ್ಣ ಸುಟ್ಟು ಹೋಗಿವೆ. ಅಲ್ಲದೇ ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳಿಗೆ ಅರಕಲಗೂಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

