ಮೂಡುಬಿದಿರೆ : ‘ಮೀಶೋ ಲೂಟ್ ಗಿಫ್ಟ್’ (Meesho Loot Gift) ಎಂಬ ಹೆಸರಿನಿಂದ ಹರಿದಾಡುತ್ತಿರುವ ನಕಲಿ ವಾಟ್ಸಾಪ್ ಲಿಂಕ್‌ನಿಂದಾಗಿ ಮೂಡುಬಿದಿರೆ ಪ್ರದೇಶದ ಹಲವರ ಮೊಬೈಲ್ ಮತ್ತು ವಾಟ್ಸಾಪ್ ಖಾತೆಗಳು ಹ್ಯಾಕ್ ಆಗಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಭಾನುವಾರದಿಂದ ಈ ಫೇಕ್ ಲಿಂಕ್ ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಳಕೆದಾರರನ್ನು ವಂಚಿಸುವ ಹುನ್ನಾರ ಇದಾಗಿದೆ.
ಖ್ಯಾತ ಶಾಪಿಂಗ್ ಅಪ್ಲಿಕೇಶನ್ ಆದ ಮೀಶೋ (Meesho)ನ ಹೆಸರು ಮತ್ತು ಲೋಗೊ ದುರ್ಬಳಕೆ ಮಾಡಿಕೊಂಡು ಈ ನಕಲಿ ಲಿಂಕ್ ಸೃಷ್ಟಿಸಲಾಗಿದೆ. ‘ಈ ಲಿಂಕ್ ಅನ್ನು ಗ್ರೂಪ್‌ಗಳು ಮತ್ತು ವೈಯಕ್ತಿಕ ವಾಟ್ಸಾಪ್ ಸಂಖ್ಯೆಗಳಿಗೆ ಕಳುಹಿಸಿದರೆ ಆಕರ್ಷಕ ಉಡುಗೊರೆ (Gift) ಸಿಗುತ್ತದೆ’ ಎಂಬ ಪ್ರಲೋಭನಕಾರಿ ಸಂದೇಶ ಇದರೊಂದಿಗೆ ಹರಿದಾಡುತ್ತಿದೆ.
ಮೂಡುಬಿದಿರೆಯಲ್ಲಿ ಈ ಲಿಂಕ್‌ಗೆ ಕ್ಲಿಕ್ ಮಾಡಿದ ಕೆಲವರ ವಾಟ್ಸಾಪ್ ಸಂಪೂರ್ಣವಾಗಿ ಹ್ಯಾಕ್ ಆಗಿದೆ. ಕೆಲವು ಸಂತ್ರಸ್ತರ ವಾಟ್ಸಾಪ್ ಸಂಖ್ಯೆಯಿಂದಲೇ ಬೇರೆಯವರಿಗೆ ‘ಹಣದ ಬೇಡಿಕೆ’ (Money Request) ಸಂದೇಶಗಳು ಹೋಗುತ್ತಿರುವುದು ವರದಿಯಾಗಿದೆ. ಇನ್ನು ಕೆಲವು ಬಳಕೆದಾರರು ಲಿಂಕ್ ತೆರೆದು ಸುಮ್ಮನಿದ್ದರೂ ಅವರು ಇರುವ ಗ್ರೂಪ್‌ಗಳು ಮತ್ತು ಇತರ ಸಂಪರ್ಕ ಸಂಖ್ಯೆಗಳಿಗೆ ಅವರು ಕ್ಲಿಕ್ ಮಾಡಿದ ಫೇಕ್ ಲಿಂಕ್ ಸ್ವಯಂಚಾಲಿತವಾಗಿ ಫಾರ್ವರ್ಡ್ ಆಗುತ್ತಿರುವುದು ಕಂಡುಬಂದಿದೆ.
ಇಂಥ ನಕಲಿ ಲಿಂಕ್‌ಗಳ ಮೂಲಕ ಸೈಬರ್ ಕಳ್ಳರು ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಣಕಾಸಿನ ವಿವರಗಳನ್ನು ಕದಿಯುವ ಸಾಧ್ಯತೆ ಇದೆ. ಸಾರ್ವಜನಿಕರು ಅಪರಿಚಿತ ಮೂಲಗಳಿಂದ ಬರುವ ಅಥವಾ ಆಮಿಷವೊಡ್ಡುವ ಇಂಥ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು ಮತ್ತು ಯಾವುದೇ ಕಾರಣಕ್ಕೂ ಫಾರ್ವರ್ಡ್ ಮಾಡದಿರುವುದು ಉತ್ತಮ.

