ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಇಂದು ನವಂಬರ್ 9ರಂದು ಭಾತೃತ್ವದ ಭಾನುವಾರವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಧರ್ಮಕ್ಷೇತ್ರದ ಎಸ್ಟೇಟ್ ಮ್ಯಾನೇಜರ್ ವಂದನೀಯ ಫಾದರ್ ಮ್ಯಾಕ್ಸಿಂ ರುಜಾರಿಯೊರವರು ಪ್ರದಾನ ಧರ್ಮಗುರುಗಳಾಗಿ ಆಗಮಿಸಿ ದಿವ್ಯ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು.



ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, “ಪ್ರಿಯ ಸಹೋದರ ಸಹೋದರಿಯರೇ, ಭರವಸೆಯ ಯಾತ್ರಿಕರಾಗಿ ಪರಮ ಪ್ರಸಾದದ ಸುತ್ತ ಧರ್ಮಕೇಂದ್ರವನ್ನು ಒಂದು ಕುಟುಂಬವನ್ನಾಗಿ ರೂಪಿಸೋಣ. ಪ್ರತಿಯೊಬ್ಬರೂ ಅನ್ಯೋನ್ಯತೆಯಿಂದ ಬಾಳಿ ಕ್ರಿಸ್ತನಿಗೆ ಸಾಕ್ಷಿಯಾಗಿ ಪರರ ಜೀವನದಲ್ಲಿ ಬೆಳಕಾಗಿ ಬದುಕಬೇಕು. ಇತ್ತೀಚೆಗೆ ನೀವು ಕೇರಳದ ಒಂದು ಚರ್ಚ್ ನಲ್ಲಿ ನಡೆದ ಒಂದು ಪವಾಡದ ಕುರಿತು ಕೇಳಿರಬಹುದು. ವಿಶ್ವಾಸದಿಂದ ಪ್ರಾರ್ಥಿಸಿದರೆ ಅದೇ ಪವಾಡವು ಈ ಸೂರಿಕುಮೇರು ಚರ್ಚ್ ನಲ್ಲಿಯೂ ನಡೆಯುತ್ತದೆ ಎಂದು ನೆರೆದ ಎಲ್ಲಾ ಭಕ್ತರಿಗೂ ವಿಶ್ವಾಸದಿಂದ ಪ್ರಾರ್ಥಿಸಲು ಕರೆ ನೀಡಿದರು.




ದಿವ್ಯ ಬಲಿಪೂಜೆಯಲ್ಲಿ ಸೂರಿಕುಮೇರು ಚರ್ಚ್‌ನ ಮಣ್ಣಿನ ಮಗ ವಂದನೀಯ ಫಾದರ್ ವಿಕ್ಟರ್ ಡಯಾಸ್ ಸಹ ಭಾಗಿಯಾಗಿದ್ದರು. ಬಲಿಪೂಜೆಯ ನಂತರ ಪರಮ ಪ್ರಸಾದದ ಭವ್ಯ ಮೆರವಣಿಗೆಯು ಸೂರಿಕುಮೇರು ಚರ್ಚ್‌ನಿಂದ ಸೂರಿಕುಮೇರು ಜಂಕ್ಷನ್ ತನಕ ಸಾಗಿತು.
ಪರಮ ಪ್ರಸಾದದ ಆಶೀರ್ವಚನದ ಬಳಿಕ ಭಾತೃತ್ವದ ಭಾನುವಾರ ಆಚರಣೆಗೆ ಸಹಕರಿಸಿದ ಜೋನ್ ಪಿರೇರಾ, ಪ್ರೀತಿ ಲ್ಯಾನ್ಸಿ ಪಿರೇರಾ, ರೀಟಾ ಸುವಾರಿಸ್, ರೋಷನ್ ಬ್ಲ್ಯಾನಿ ಡಿಸೋಜ ಹಾಗೂ ಇತರ ದಾನಿಗಳನ್ನು ಫಾದರ್ ಮ್ಯಾಕ್ಸಿಂ ರುಜಾರಿಯೊರವರು ಶಾಲು ಹೊದಿಸಿ ಸನ್ಮಾನಿಸಿದರು.




ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಹಾಗೂ ಕಥೊಲಿಕ್ ಸಭಾ ಸೂರಿಕುಮೇರು ಘಟಕದ ಅಧ್ಯಕ್ಷ ಎಲಿಯಾಸ್ ಪಿರೇರಾ, ನಿಕಟ ಪೂರ್ವ ಅಧ್ಯಕ್ಷ ತೊಮಸ್ ಲಸ್ರಾದೊ, ವಾರ್ಡ್ ಗುರಿಕಾರರಾದ ಮೇರಿ ಡಿಸೋಜ, ಐರಿನ್ ಡಿಸೋಜ, ಪ್ರೀತಿ ಸುವಾರಿಸ್, ರೆಮಿ ಡಿಸೋಜ, ಮೈಕಲ್ ಎಂ. ಮೊದಲಾದವರು ಉಪಸ್ಥಿತರಿದ್ದರು.
ವೆಲಂಕಣಿ ವಾರ್ಡ್‌ನ ಬ್ರಿಯಾನ್ ಮತ್ತು ಕ್ಲ್ಯಾರಾ ಪಿರೇರಾ ದಂಪತಿಗಳು ಎಲ್ಲಾ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಿದ್ದರು.

