ಕಲಬುರಗಿ: ತಾಲ್ಲೂಕಿನ (ಬಿ) ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.ಡೀಸೆಲ್ ಟ್ಯಾಂಕರ್, ಬೈಕ್ ಹಾಗೂ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ಇಬ್ಬರು ಸವಾರರು ಹಾಗೂ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ತಿಳಿಯಲಾಗಿದೆ.ಬೈಕ್ ಸವಾರರಾದ ಕಮಲಾಪುರ ತಾಲ್ಲೂಕಿನ ಸಿರಡೋಣ ಗ್ರಾಮದ ನಾಗೇಂದ್ರಪ್ಪ ಮೂಲಗೆ (35) ಹಾಗೂ ಶಿವಕುಮಾರ ಮೂಲಗೆ (27), ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಜೋಳದಾಪಕಾ ಗ್ರಾಮದ ನಿವಾಸಿ, ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ದತ್ತಾ ನಾಗೇಂದ್ರ ಚಿಮ್ಮಾಜಿ (42) ಮತ್ತು ಚಂದ್ರಕಲಾ ನಾಗೇಂದ್ರ ಚಿಮ್ಮಾಜಿ (75) ಮೃತಪಟ್ಟಿದ್ದಾರೆ.

ಮೃತರ ಪೈಕಿ ನಾಗೇಂದ್ರಪ್ಪ ಹಾಗೂ ಶಿವಕುಮಾರ ಕೂಲಿ ಕಾರ್ಮಿಕರು ಹಾಗೂ ಒಂದೇ ಕುಟುಂಬದ ಸೋದರ ಸಂಬಂಧಿಗಳು. ಚಂದ್ರಕಲಾ ಹಾಗೂ ದತ್ತಾ ತಾಯಿ-ಮಗ ಎಂದು ತಿಳಿದು ಬಂದಿದೆ.‘ಬೈಕ್‌ನಲ್ಲಿದ್ದ ಸಿರಡೋಣ ಗ್ರಾಮದ ಉತ್ತಮ ಮೈಲಾರಿ ಭಾವಿಕಟ್ಟಿ ಹಾಗೂ ಕಾರಿನಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.ಬೈಕ್ ಸವಾರರು ಕೆಲಸ ಮುಗಿಸಿ ಕಲಬುರಗಿಯಿಂದ ಕಮಲಾಪುರದ ಸಿರಡೋಣದತ್ತ ಹೊರಟ್ಟಿದ್ದರು. ಅದರ ಮುಂದೆ ಕಾರು ಕಲಬುರಗಿಯಿಂದ ಬೀದರ್‌ನತ್ತ ಹೊರಟ್ಟಿತ್ತು. ಈ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಕಾರು ಹಾಗೂ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಭೀಕರ ರಸ್ತೆ ಅಪಘಾತದಿಂದ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.ಚಂದ್ರಕಲಾ ಹಾಗೂ ದತ್ತಾ ಅವರ ಅಂತ್ಯಸಂಸ್ಕಾರ ಸ್ವಗ್ರಾಮ ಭಾಲ್ಕಿ ತಾಲ್ಲೂಕಿನ ಜೋಳದಾಪಕಾ ಗ್ರಾಮದ ಹೊಲದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಈ ಕುರಿತು ಕಲಬುರಗಿ ಸಂಚಾರ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

