ಮಂಗಳೂರು : ನಗರದ ಸಮೀಪ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಕಪ್ ವಾಹನ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಕೇರಳ ರಾಜ್ಯದ ಕುಖ್ಯಾತ ಅಂತರ್ ರಾಜ್ಯ ವಾಹನ ಕಳವು ಆರೋಪಿಯೋರ್ವನನ್ನು ದಸ್ತಗಿರಿ ಮಾಡಿ ಪಿಕಪ್ ವಾಹನ ಹಾಗೂ ಬೈಕ್‌ನ್ನು ವಶಪಡಿಸಿಕೊಳ್ಳುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತನನ್ನು ಕೇರಳದ ಹಂಝ ಕುಪ್ಪಿಕಂಡ @ ಹಂಸ @ ಹಂಝ ಪೊನ್ನನ್ (29) ಎಂದು ಗುರುತಿಸಲಾಗಿದೆ.
ಸೆ.30ರಂದು ರಾತ್ರಿ ಸುಮಾರು 9-00 ಗಂಟೆಗೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಯ ಸುಕುಮಾರ್ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನವನ್ನು ಕಳ್ಳತನ ಮಾಡಿದ್ದು, ಈ ಕುರಿತಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ವೇಳೆ ಅ.07 ರಂದು ಅನುಮಾನಾಸ್ಪದವಾಗಿ ಬೈಕ್ ನಲ್ಲಿ ತಿರುಗಾಡುತ್ತಿದ್ದ ಯುವಕನನ್ನು ವಿಚಾರಣೆ ನಡೆಸಿದಾಗ ಆತನು ಚಲಾಯಿಸುತ್ತಿದ್ದ ಬೈಕ್‌ಗೆ ಯಾವುದೇ ದಾಖಲಾತಿಗಳಿಲ್ಲದೇ ಇದ್ದು, ಬೈಕ್‌ನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಫಾರಂ ಮಾಲ್ ಬಳಿಯಿಂದ ಕಳ್ಳತನ ಮಾಡಿರುವುದಾಗಿದೆ ತಿಳಿದು ಬಂದಿದೆ. ಬಳಿಕ ಆರೋಪಿಯನ್ನು ಅರೆಸ್ಟ್ ಮಾಡಿ ವಿಚಾರಿಸಿದಾಗ ಪಿಕಪ್ ವಾಹನ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದಾನೆ.
ಇದೀಗ ಆರೋಪಿಯಿಂದ ಈ ಎರಡು ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ವಾಹನಗಳ ಒಟ್ಟು ಮೊತ್ತ ರೂ. 3,10,000/ ಎಂದು ಅಂದಾಜಿಸಲಾಗಿದೆ.
ಆರೋಪಿ ಹಂಝ ಕುಪ್ಪಿಕಂಡ @ ಹಂಸ @ ಹಂಝ ಪೊನ್ನನ್ ಎಂಬಾತನು ಕುಖ್ಯಾತ ಕಳ್ಳತನ ಆರೋಪಿಯಾಗಿದ್ದು, ಈತನ ವಿರುದ್ದ ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊಬೈಲ್ ಕಳ್ಳತನ, ವಾಹನ ಕಳ್ಳತನ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.