ಕುಂದಾಪುರ: ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯೋರ್ವನ ಮೃತದೇಹ ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಮೃತ ವಿದ್ಯಾರ್ಥಿ ಖಾಸಗಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ, ಹೆಮ್ಮಾಡಿ ಸಂತೋಷನಗರ ನಿವಾಸಿ ಲವೇಶ್ ಪೂಜಾರಿ ಇವರ ಪುತ್ರ ನಮೇಶ್ (17) ಎಂದು ತಿಳಿದು ಬಂದಿದೆ. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ವಾಪಾಸ್ಸಾಗಿರಲಿಲ್ಲ. ಇತ್ತೀಚೆಗಷ್ಟೇ ತಂದೆ ಕೊಡಿಸಿದ್ದ ತನ್ನ ಐಫೋನ್ ಮೊಬೈಲ್ ಅನ್ನು ಮನೆಯಲ್ಲಿಯೇ ಬಿಟ್ಟು ಬೈಕ್‌ನಲ್ಲಿ ತೆರಳಿದ್ದ ನಮೇಶ್ ಹೆಮ್ಮಾಡಿ ಸಮೀಪದ ಕನ್ನಡಕುದ್ರು ನದಿ ತೀರದಲ್ಲಿ ಬೈಕ್ ಹಾಗೂ ತನ್ನ ಕಾಲೇಜು ಬ್ಯಾಗ್ ಅನ್ನು ಬಿಟ್ಟು ನಾಪತ್ತೆಯಾಗಿದ್ದನು ಎಂದು ತಿಳಿದು ಬಂದಿದೆ.
ನಮೇಶ್ ರಾತ್ರಿಯಾದರೂ ಮನೆಗೆ ಬಾರದಿದ್ದುದನ್ನು ಗಮಿಸಿದ ಮನೆಯವರು ಕುಂದಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿ ಶೋಧ ಕಾರ್ಯ ಆರಂಭಿಸಿದ್ದರು ಎಂದು ತಿಳಿದು ಬಂದಿದೆ. ಶನಿವಾರ ಬೆಳಿಗ್ಗೆ ನಮೇಶ್ ಮೃತದೇಹ ಗಂಗೊಳ್ಳಿ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.