ಮಂಗಳೂರು: ಸುರತ್ಕಲ್ ಬಳಿಯ ಮುಕ್ಕದ ಲೇಔಟ್ ಒಂದರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರತುವಾ ಪರಂಪುರ್ ನಿವಾಸಿ ಮುಖೇಶ್ ಮಂಡಲ್ (27) ಎಂಬವರನ್ನು ಕೊಲೆ ಮಾಡಿ ಎಸ್‌ಟಿಪಿ ಟ್ಯಾಂಕ್ ನಲ್ಲಿ ಹಾಕಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪಿಯನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರತುವಾ ಬಾದೋ ಗ್ರಾಮದ ನಿವಾಸಿ ಲಕ್ಷ್ಮಣ್ ಮಂಡಲ್ ಯಾನೇ ಲಖನ್ (30) ಎಂದು ಗುರುತಿಸಲಾಗಿದೆ.
ಮುಖೇಶ್ ಮಂಡಲ್ ಲೇ ಔಟ್‌ನಿಂದ ಜೂ.24ರಂದು ದಿಢೀರ್ ಕಣ್ಮರೆಯಾಗಿದ್ದು, ಈ ಬಗ್ಗೆ ಆತನ ಜತಗೆ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ನಿವಾಸಿ ದೀಪಾಂಕರ್ ಜು.2ರಂದು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಈ ನಡುವೆ ಆ.21ರಂದು ಬೆಳಗ್ಗೆ 10 ಗಂಟೆಗೆ ಲೇಔಟ್ ಎಸ್‌ಟಿಪಿ ಟ್ಯಾಂಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮುಖೇಶ್ ಮಂಡಲ್‌ನ ಮೃತ ದೇಹ ಪತ್ತೆಯಾಗಿತ್ತು. ಮುಖೇಶ್‌ನನ್ನು ಲಕ್ಷ್ಮಣ್ ಮಂಡಲ್ ಕೊಲೆ ಮಾಡಿ ಟ್ಯಾಂಕ್‌ಗೆ ಹಾಕಿ ಅದರ ಮುಚ್ಚಳವಾಗಿ ಫ್ಲೈ ವುಡ್ ಶೀಟನ್ನು ಮುಚ್ಚಿ ಕೊಲೆಯನ್ನು ಮರೆ ಮಾಚಲು ಯತ್ನಿಸಿದ್ದ. ಈ ಬಗ್ಗೆ ಚೇತನ್ ಎಂಬವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಎರಡು ತಂಡ ರಚನೆ ಆರೋಪಿ ಪತ್ತೆಗಾಗಿ ಠಾಣಾ ಪಿಎಸ್‌ಐ ಶಶಿಧರ ಶೆಟ್ಟಿ ಹಾಗೂ ಎಎಸ್‌ಐ ರಾಜೇಶ್ ಆಳ್ವಾ ಅವರ ತಂಡವನ್ನು ರಚಿಸಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಿಕೊಡಲಾಗಿತ್ತು. ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಶಶಿಧರ ಶೆಟ್ಟಿ ಅವರ ತಂಡ ಲಕ್ಷ್ಮಣ್ ಮಂಡಲ್‌ನನ್ನು ಬಂಧಿಸಿ ಠಾಣೆಗೆ ಕರೆತಂದಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಜೂ.24ರಂದು ರಾತ್ರಿ 9 ಗಂಟೆಗೆ ಲೇಔಟ್ ನಲ್ಲಿ ನಿರ್ಮಾಣ ಹಂತದ ಕಟ್ಟಡದೊಳಗೆ ತಾನು ಮುಖೇಶ್ ಮಂಡಲ್ ಮದ್ಯಪಾನ ಮಾಡುತ್ತಿದ್ದೆವು. ಈ ವೇಳೆ ಆತ ನನ್ನ ಪತ್ನಿಯ ಅಶ್ಲೀಲ ವೀಡಿಯೋಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿ ಇಟ್ಟಿರುವುದನ್ನು ತೋರಿಸಿದ್ದಾನೆ. ಇದರಿಂದ ಕೋಪಗೊಂಡು ಪಕ್ಕದ ರೂಮಿನಲ್ಲಿದ್ದ ಕಬ್ಬಿಣದ ಸರಳನ್ನು ತೆಗೆದುಕೊಂಡು ಬಂದು ಆತನ ತಲೆಗೆ ಹೊಡೆದು ಕೊಲೆ ಮಾಡಿದ್ದೇನೆ. ಬಳಿಕ ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಅಲ್ಲೇ ಇದ್ದ ಎಸ್‌ಟಿಪಿ ಟ್ಯಾಂಕ್ ಒಳಗೆ ಹಾಕಿದ್ದೇನೆ ಎಂದು ತಪ್ಪು ಒಪ್ಪಿಕೊಂಡಿದ್ದಾನೆ.
ಸೆ.4ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 5 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿ ಲಕ್ಷ್ಮಣ್ ಮಂಡಲ್ ಮೇಲೆ ಪಶ್ಚಿಮ ಬಂಗಾಳ ರಾಜ್ಯದ ರತುವಾ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿವೆ.
ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ನೇತೃತ್ವದಲ್ಲಿ ಪಿಎಸ್‌ಐಗಳಾದ ರಘುನಾಯಕ, ರಾಘವೇಂದ್ರ ನಾಯ್ಕ, ಜನಾರ್ದನ ನಾಯ್ಕ, ಶಶಿಧರ ಶೆಟ್ಟಿ, ಎಎಸ್‌ಐ ರಾಜೇಶ್ ಆಳ್ವಾ, ತಾರನಾಥ, ಹಾಗೂ ಸಿಬಂದಿ ಅಣ್ಣಪ್ಪ, ಉಮೇಶ್ ಕುಮಾರ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ಮೋಹನ್ ಮತ್ತು ನಾಗರಾಜ್ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.