ಅದೃಷ್ಟವಶಾತ್ ಏಳು ಮಂದಿ ಪಾರು
ಅತೀ ವೇಗವಾಗಿ ಮುನ್ನುಗ್ಗಿ ಬಂದ ಕಾರೊಂದು ರಸ್ತೆ ವಿಭಜಕವೇರಿ ಮತ್ತೊಂದು ಪಾಶ್ವಕ್ಕೆ ಹಾರಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಕಾರುಗಳು ಜಖಂ ಗೊಂಡಿದ್ದರೂ ಕಾರುಗಳಲ್ಲಿದ್ದ ಏಳು ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಹೆಜಮಾಡಿ ಗಡಿಭಾಗ ಸೇತುವೆಗೆ ಸಮೀಪದ ಪೆಟ್ರೋಲ್ ಬಂಕ್ ಸಮೀಪ ಸಂಭವಿಸಿದೆ.
ಮಂಜೇಶ್ವರದಿಂದ ಗೋಕರ್ಣ ಮಠಕ್ಕೆ ಬಾಡಿಗೆ ಕಾರೊಂದರಲ್ಲಿ ಬಹುತೇಕ ಹಿರಿಯರನ್ನು ಹೊತ್ತು ಸಾಗಿಸುತ್ತಿದ್ದ ಕಾರಿಗೆ, ಉಡುಪಿ ಸಮೀಪದ ಉದ್ಯಾವರದಿಂದ ಮಂಗಳೂರಿಗೆ ಕಾರಿನ ಮಾಲಕರೇ ಚಾಲಕರಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವೇರಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಡಿಕ್ಕಿಯಾದ ಕಾರಿನ ಮುಂಭಾಗ ಬಹುತೇಕ ಜಖಂಗೊಂಡು ಹೆದ್ದಾರಿ ಮಧ್ಯೆ ಸ್ಥಗಿತಗೊಂಡರೆ, ಅಪಘಾತಕ್ಕೀಢಾದ ಮತ್ತೊಂದು ಕಾರು ಸುಮಾರು ಮೂವತ್ತು ಮೀಟರ್ ದೂರದ ಪೆಟ್ರೋಲ್ ಬಂಕ್ ಮುಂಭಾಗದ ಮೋರಿಯೊಂದಕ್ಕೆ ಹೊಮ್ಮುಖವಾಗಿ ಬಿದ್ದು ನಿಂತಿದೆ.
ಅಧೃಷ್ಟವಶಾತ್ ಅಪಘಾತ ಹೊತ್ತಲ್ಲಿ ಹೆದ್ದಾರಿಯಲ್ಲಿ ಬೇರೆ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಏಳು ಮಂದಿಯ ಪ್ರಾಣ ಉಳುಕೊಂಡಿದೆ ಎನ್ನುತ್ತಾರೆ ಸ್ವತಃ ಅಪಘಾತ ವಾಹನದಲ್ಲಿದ್ದ ಪ್ರಯಾಣಿಕರು. ಅಪಘಾತಕ್ಕೆ ಕಾರಣ ಹೆದ್ದಾರಿಯಲ್ಲಿ ಶೇಖರಣೆಗೊಂಡಿರುವ ನೀರು, ಅದರ ಮೇಲಿಂದ ನನ್ನ ಕಾರು ಚಲಿಸಿದಾಗ ನಿಯಂತ್ರಣ ಕಳೆದುಕೊಂಡೆ ಎನ್ನುತ್ತಾರೆ ಅಪಘಾತಕ್ಕೆ ಕಾರಣವಾದ ಕಾರು ಚಾಲಕ. ಅಪಘಾತ ಕಾರೊಂದು ಹೆದ್ದಾರಿ ಮಧ್ಯೆ ಉಳಿದುಕೊಂಡಿದ್ದು ಸ್ಥಳೀಯ ಟೋಲ್ ಸಿಬ್ಬಂದಿಗಳು ಸಹಿತ112 ಪೊಲೀಸ್ ಗಸ್ತು ವಾಹನ ಸಹಿತ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದರೂ, ಬಾರ ಎತ್ತುವ ವಾಹನ ಬರಲು ವಿಳಂಬವಾಗಿದ್ದರಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ.