ಸುರತ್ಕಲ್ : ಟಿಪ್ಪರ್ ಲಾರಿಯ ಚಕ್ರಕ್ಕೆ ಸಿಲುಕಿ ದ್ವಿಚಕ್ರ
ಸಹ ಸವಾರೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಎಂ.ಆರ್.ಪಿ.ಎಲ್. ಕಾರ್ಗೋ ಗೇಟ್ ಬಳಿ ಬುಧವಾರ ಮಧ್ಯಾಹ್ನ ವರದಿಯಾಗಿದೆ.
ಉತ್ತರ ಕನ್ನಡ ಮೂಲದ ಪ್ರಸ್ತುತ ಕಾಟಿಪಳ್ಳ ಕೈಕಂಬದಲ್ಲಿ ವಾಸವಿರುವ ಶ್ವೇತಾ (20) ಮೃತಪಟ್ಟವರು ಎಂದು ತಿಳಿದು ಬಂದಿದೆ. ಬೈಕ್ ಚಲಾಯಿಸುತ್ತಿದ್ದ ಅವರ ಸಹೋದರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಶ್ವೇತಾ ಅವರು ತನ್ನ ಸಹೋದರನ ಬೈಕ್ ನಲ್ಲಿ ಕಾಟಿಪಳ್ಳ ಕೈಕಂಬದಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದ ಸಂದರ್ಭ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಅಡಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬಳಿಕ ಆಕೆಯ ಹೊಟ್ಟೆಯ ಮೇಲ್ಬಾಗದಿಂದ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಚಾಲಕ ಲಾರಿ ಬಿಟ್ಟು  ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.



ಸುರತ್ಕಲ್ – ಕಾನ- ಕಾಟಿಪಳ್ಳ ಕೈಕಂಬ ರಸ್ತೆಯಲ್ಲಿ ನಿರಂತರ ಅಪಘಾತಗಳು ನಡೆಯುತ್ತಲೇ ಇವೆ. ರಸ್ತೆಯ ಎರಡೂ ಬದಿಗಳಲ್ಲಿ ಗ್ಯಾಸ್ ಬುಲೆಟ್ ಟ್ಯಾಂಕರ್ ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ರಸ್ತೆ ಇಕ್ಕಟ್ಟಾಗಿ ಸಂಚಾರಕ್ಕೆ ತೊಂದರೆಗಳಾಗುತ್ತಿದ್ದು, ಇದರಿಂದಾಗಿಯೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.
ಬುಲೆಟ್ ಟ್ಯಾಂಕರ್ ಗಳ ನಿಲುಗಡೆಗೆ ಸುಸಜ್ಜಿತ ಮೈದಾನಗಳಿದ್ದರೂ ಚಾಲಕರು ರಸ್ತೆ ಬದಿ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ರಸ್ತೆ ಇಕ್ಕಟ್ಟಾಗಿ ಸಂಚಾರ ದುಸ್ತರವಾಗುತ್ತಿದೆ. ಅಲ್ಲದೆ, ಬೃಹತಾಕಾರದ ಲಾರಿಗಳು ರಸ್ತೆ ಬದಿ ನಿಲ್ಲುವುದರಿಂದ ಎದುರಿನಲ್ಲಿ ಸಂಚರಿಸುವ ಸಣ್ಣವಾಹನಗಳು ಚಾಲಕರಿಗೆ ಗೋಚರಿಸುವುದಿಲ್ಲ. ಪಾರ್ಕಿಂಗ್ ಗೆ ಅವಕಾಶಗಳಿದ್ದರೂ ರಸ್ತೆ ಬದಿ ನಿಲ್ಲಿಸಿ ಅನೇಕ ಅಪಘಾತಗಳಿಗೆ ಕಾರಣವಾಗುತ್ತಿರುವ ಬುಲೆಟ್ ಟ್ಯಾಂಕರ್ ಲಾರಿಗಳ ಮೇಲೆ ಮಂಗಳೂರು ಸಂಚಾರ ಪೊಲೀಸರು ಸೂಕ್ತ ಕ್ರಮವಹಿಸಬೇಕು. ರಸ್ತೆ ಬದಿ ಲಾರಿಗಳ ನಿಲುಗಡೆಗೆ ನಿಷೇಧ ಹೇರಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.


