ಮಂಗಳೂರು: ಏಳ್ಕಾನಗುತ್ತು ದೊಡ್ಡಮನೆ ಶ್ರೀನಿವಾಸ ಆಳ್ವ ಕಳತ್ತೂರು ಅವರು ತುಳು ಭಾಷೆ, ನಾಡಪರಂಪರೆ ಮತ್ತು ಜಾನಪದ ಸಂಸ್ಕೃತಿಗೆ ಆತ್ಮಸಮ್ಮಾನದ ಸೇವೆ ಸಲ್ಲಿಸುತ್ತಿರುವ ಹಲವಾರು ಚಟುವಟಿಕೆಗಳಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದ್ದಾರೆ. ಅವರು ಬರೆದ “ಧರ್ಮ ಚಾವಡಿ” ತುಳು ಕಾದಂಬರಿ ಹಲವು ಓದುಗರ ಮೆಚ್ಚುಗೆ ಗಳಿಸಿದೆ. ತುಳುವರ್ಲ್ಡ್ ರೇಡಿಯೋದಲ್ಲಿ ಕಾರ್ಯಕ್ರಮ ನಿರ್ವಹಣೆ, “ಜೈ ತುಳುನಾಡ್ ಕಾಸ್ರೋಡು” ಉಪಾಧ್ಯಕ್ಷ ಸ್ಥಾನ, ಕಾಸ್ರೋಡು ತುಳು ಕೂಟದ ಕಾರ್ಯದರ್ಶಿ, ಬದಿಯಡ್ಕ ವಿಶ್ಟ ತುಳುವೆರೆ ಆಯನೊದ ಸಂಚಾಲಕ, ಇಚ್ಲಂಪಾಡಿ ಶಾಲಾ ಅಮೃತ ಮಹೋತ್ಸವದ ಪ್ರಧಾನ ಕಾರ್ಯದರ್ಶಿ, ಕುಂಠಿಕಾನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ ಅವರು ಹಲವಾರು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಗಳಲ್ಲಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ.
ತಂದೆ ಶಂಕರ ಆಳ್ವರಿಂದ ಪಡೆದ ನಾಟಿವೈದ್ಯ ಪರಂಪರೆಯನ್ನು ಅವರು ಮುಂದುವರೆಸಿದ್ದು, ಅಗ್ನಿಬಾಧೆ,ಗಳಿಗೆ ಮಂತ್ರದ ಮೂಲಕ ಅಗ್ನಿಶಮನಗೊಳಿಸಿ ಗಿಡಮೂಲಿಕೆಗಳ ಉಚಿತ ಜೌಷದಿಚಿಕಿತ್ಸೆ ನೀಡಿ ನಾಡಿನ ಆರೋಗ್ಯ ಸಂಸ್ಕೃತಿಗೆ ಜೀವಂತ ರೂಪ ನೀಡಿದ್ದಾರೆ.
ಬಾಲ್ಯದಿಂದಲೇ ಪಾಡ್ದನ, ನಾಟಕ, ಜನಪದ ಕಲೆಗಳ ಆಸಕ್ತಿಯನ್ನು ಬೆಳೆಸಿಕೊಂಡು, ಹಲವಾರು ನಾಟಕಗಳಲ್ಲಿ ಪಾತ್ರವಹಿಸಿ, ನಿರ್ದೇಶನವನ್ನೂ ಮಾಡಿ, ಇತ್ತೀಚೆಗೆ ಛತ್ರಪತಿ ಶಿವಾಜಿ ನಾಟಕವನ್ನು ಕನ್ನಡದಿಂದ ತುಳುವಿಗೆ ತರ್ಜಮೆ ಗೊಳಿಸಿದ್ದಾರೆ.ಜನಪದ ವೇದಿಕೆಗಳಲ್ಲಿ ಭಾಷಣಗಳ ಮೂಲಕ ತಮ್ಮ ಪ್ರಭಾವ ವ್ಯಕ್ತಪಡಿಸಿರುವ ಅವರು, ನಾಡಿನ ನುಡಿ–ಸಂಸ್ಕೃತಿಗೆ ಶ್ರದ್ಧಾ ಸಮರ್ಪಿತ ವ್ಯಕ್ತಿತ್ವವನ್ನು ಹೊಂದಿದ್ದಾರೆ.ಕನ್ನಡ ಹಾಗು ತುಳು ಬಾಷೆಗಳಲ್ಲಿ ಉತ್ತಮ ನಿರೂಪಕರಾಗಿದ್ದು ಆಕಾಶವಾಣಿ ಹಾಗು ಹಲವಾರು ದೃಶ್ಶ ಮಾದ್ಶಮಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರಲ್ಲದೆ ಕಾಸರಗೋಡು kcn ಮಾದ್ಶಮದಲ್ಲಿ ತುಳು ವಾರ್ತಾ ವಾಚಕರಾಗಿದ್ದರು.
ಶ್ರೀನಿವಾಸ ಆಳ್ವ ಅವರು ತುಳುನುಡಿಯ ಹಿತೈಷಿ ಮಾತ್ರವಲ್ಲದೆ, ನಾಡುಪರಂಪರೆಯ ಜೀವಂತ ಪ್ರತಿರೂಪ. ದಾರಿ ತಪ್ಪುವ ದೈವಾರಾದನೆ ಹಾಗು ತುಳು ಸಂಸ್ಕೃತಿಯತ್ತ ವಿಶೇಷ ಗಮನ ಹರಿಸುವ ಇವರು ದಾರಿತಪ್ಪಿಸುವವರನ್ನು ನಿಷ್ಠೂರವಾಗಿ ಎದುರಿಸಬಲ್ಲವರಾಗಿದ್ದಾರೆ.ಉತ್ತಮ ಕೃಷಿಕರಾದ ಇವರು ಹೈನುಗಾರಿಕೆಯಲ್ಲಿ ಪಳಗಿದವರಾಗಿದ್ದು ಕಿದೂರು ಕ್ಷೀರೋದ್ಪಾಕರ ಸಹಕಾರಿ ಸಂಘದ ಮಾಜಿನಿರ್ದೇಶಕರೂ ಆಗಿದ್ದರು.
ಶ್ರೀನಿವಾಸ ಆಳ್ವ ಅವರ ನೇತೃತ್ವದಿಂದ ಕಾಸರಗೋಡು ಜಿಲ್ಲೆಯಲ್ಲಿ ತುಳುವರ್ಲ್ಡ್ ಸಂಸ್ಥೆಯ ಚಟುವಟಿಕೆಗಳು ಮತ್ತಷ್ಟು ಪ್ರಭಾವಶಾಲಿಯಾಗಲಿವೆ. ನುಡಿಗೂ ನಾಡಿಗೂ ಇದು ಶಕ್ತಿ ತುಂಬುವ ಹಂತವಾಗಲಿ ಎಂದು ತುಳು ಪರ ಸಂಘಟನೆಗಳ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ನಾಯಕರು ಶುಭ ಹಾರೈಸಿದ್ದಾರೆ.