ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕಾಲೇಜು ವಿದ್ಯಾರ್ಥಿಯೋರ್ವ ತಾಯಿಯೊಂದಿಗೆ ಜಗಳ ಮಾಡಿ ಮನೆ ಬಿಟ್ಟು ಬಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಸುಮಂತ ದೇವಾಡಿಗ ಎಂದು ತಿಳಿಯಲಾಗಿದೆ.ಕಾರ್ಕಳ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಪ್ರಶಾಂತ (25), ಮಿಯಾರು ಗ್ರಾಮ,ಕಾರ್ಕಳ ಇವರ ದೊಡ್ಡಮ್ಮನ ಮಗಳಾದ ಸುರೇಖಾ ಎಂಬುವವರು ಮಗ ಸುಮಂತ ದೇವಾಡಿಗ (16) ನೊಂದಿಗೆ ನಂದಳಿಕೆಯಲ್ಲಿ ವಾಸವಾಗಿದ್ದು, ಸುಮಂತನು ನಿಟ್ಟೆ ಕಾಲೇಜಿನಲ್ಲಿ ಮೊದಲನೇ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದನು. ದಿನಾಂಕ 12/11/2025 ರಂದು ಸಂಜೆ 7:00 ಗಂಟೆಗೆ ಸುಮಂತನು ಮನೆಯಲ್ಲಿ ತನ್ನ ತಾಯಿಯೊಂದಿಗೆ ಹೊಸ ಮೊಬೈಲ್ ತೆಗೆದುಕೊಡಬೇಕೆಂದು ಜಗಳ ಮಾಡಿ ಮನೆ ಬಿಟ್ಟು ಹೋಗಿದ್ದು ಆತನನ್ನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ದಿನಾಂಕ 13/11/2025 ರಂದು ಸುಮಂತನನ್ನು ಹುಡುಕಾಡುತ್ತಿದ್ದಾಗ ಮಧ್ಯಾಹ್ನ 15:30 ಗಂಟೆಗೆ ನಂದಳಿಕೆ ಗ್ರಾಮದ ಕೊಡ್ಸರಬೆಟ್ಟು ಎಂಬಲ್ಲಿ ಸೂರ್ಯಕಾಂತ ಶೆಟ್ಟಿ ಎಂಬುವವರ ಜಾಗದಲ್ಲಿರುವ ಕಲ್ಲಿನ ಕೋರೆಯ ನಿಂತ ನೀರಿನ ಬಳಿ ಆತನ ಚಪ್ಪಲಿ ಕಂಡುಬಂದಿದ್ದು ಅನುಮಾನಗೊಂಡು ನೀರಿನಲ್ಲಿ ಹುಡುಕಾಡಿದಾಗ ಆತನ ಮೃತದೇಹ ಪತ್ತೆಯಾಗಿರುತ್ತದೆ. ಸುಮಂತ ದೇವಾಡಿಗನು ಹೊಸ ಮೊಬೈಲ್ ಕೊಡಿಸಲಿಲ್ಲ ಎಂದು ತನ್ನ ತಾಯಿಯೊಂದಿಗೆ ಜಗಳ ಮಾಡಿ ಮನೆಬಿಟ್ಟು ಹೋಗಿ ಕಲ್ಲುಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 56/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

