ಶಿವಮೊಗ್ಗ: ಕುಟುಂಬದೊಳಗಿನ ಕಿರುಕುಳದಿಂದ ಬೇಸತ್ತು ವಿಷ ಸೇವಿಸಿದ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದ್ದು, ಪತಿ ಕುಟುಂಬಸ್ಥರು ಶವವನ್ನು ಬಿಟ್ಟು ಪಾರಾಗಿದ್ದಾರೆ.

ಮೃತ ಯುವತಿಯನ್ನು ಕೋಣಂದೂರಿನವಳು ಎಂದು ಗುರುತಿಸಲಾಗಿದೆ.
ಮೂರು ವರ್ಷಗಳ ಹಿಂದೆ ಶಿವಮೊಗ್ಗದ ಶರತ್ ಎಂಬವನನ್ನು ಮದುವೆಯಾಗಿದ್ದಳು. ಈ ದಂಪತಿಗೆ ಎರಡು ವರ್ಷದ ಮಗನಿದ್ದಾನೆ.ಮದುವೆಯ ನಂತರ ಅತ್ತೆ, ಮಾವ, ಸಹೋದರಿ ಸೇರಿದಂತೆ ಶರತ್ ಕುಟುಂಬದವರು ನಿರಂತರ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳದಿಂದಾಗಿ ಮೃತಳು ಹಲವು ಬಾರಿ ತಾಯಿ ಮನೆಗೆ ಬಂದು ಸಂಕಷ್ಟವನ್ನು ಹಂಚಿಕೊಂಡಿದ್ದಳು. ಕುಟುಂಬಸ್ಥರು ಸಮಾಧಾನಗೊಳಿಸಿ ಮತ್ತೆ ಪತಿ ಮನೆಗೆ ಕಳುಹಿಸಿದ್ದರು.ಹಿಂದಿನಂತೆಯೇ ಕಿರುಕುಳ ಮುಂದುವರಿದ ನಂತರ ಯುವತಿ ಕಳೆನಾಶಕ ಸೇವಿಸಿದ್ದಳು. ತಕ್ಷಣವೇ ಅವಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಳಿಕ ಶರತ್ ಕುಟುಂಬದವರು ಶವವನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.ಯುವತಿಯ ಕುಟುಂಬಸ್ಥರು ಈ ಘಟನೆಯ ಬಗ್ಗೆ ತಿಳಿದು ಆಸ್ಪತ್ರೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವತಿಯ ಕುಟುಂಬಸ್ಥರು ಶರತ್ ಕುಟುಂಬದವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ ಮತ್ತು ಕುಟುಂಬಸ್ಥರನ್ನು ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

