ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಹಳೆಯ ನೇತ್ರಾವತಿ ಸೇತುವೆ ಮೇಲೆ ಆಟೋ ರಿಕ್ಷಾ ನಿಲ್ಲಿಸಿ ಬುಧವಾರ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಚಾಲಕನ ಮೃತದೇಹ ಗುರುವಾರ ತಲಪಾಡಿ ಡ್ಯಾಂ ಬಳಿ ಮರವೊಂದಕ್ಕೆ ಸಿಲುಕಿದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಮೃತಪಟ್ಟವರು ಮೆಲ್ಕಾರು ಸಮೀಪದ ಮಾರ್ನಬೈಲು ನಿವಾಸಿ ಪೀಟರ್ ಲೋಬೋ (60) ಎಂದು ತಿಳಿದು ಬಂದಿದೆ.ಬುಧವಾರ ಮುಂಜಾನೆ ಮನೆಯಿಂದ ಹೊರಟ ಇವರು ತನ್ನ ಆಟೋ ರಿಕ್ಷಾವನ್ನು ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ಸೇತುವೆಯ ಮೇಲೆ ಆಟೋ ರಿಕ್ಷಾ ನೋಡಿದ ಸ್ಥಳೀಯರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಸ್ಥಳೀಯ ಈಜುಪಟುಗಳ ತಂಡ ಅಗ್ನಿಶಾಮಕ ಸಿಬ್ಬಂದಿಗಳ ಜೊತೆ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರೂ ಸಂಜೆವರೆಗೂ ಚಾಲಕನ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ ಎಂದು ತಿಳಿದು ಬಂದಿದೆ.ಗುರುವಾರ ತಲಪಾಡಿ ಡ್ಯಾಂ ಬಳಿ ಮರಕ್ಕೆ ಸಿಲುಕಿದ ರೀತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ನಾಪತ್ತೆಯಾದ ಪೀಟರ್ ಲೋಬೋ ಅವರದ್ದೇ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

