Mangalore and Udupi news
Blog

ಪುತ್ತೂರು: ಅಕ್ರಮ ಜಾನುವಾರು ಸಾಗಾಟ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ, ಮತ್ತೋರ್ವ ಪರಾರಿ

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಳ ಎಂಬಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐಷರ್ ವಾಹನವನ್ನು ತಡೆಯಲು ಯತ್ನಿಸಿದ ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದು ಕೊಲೆಯತ್ನ ನಡೆಸಿದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಆರೋಪಿಯ ಕಾಲಿಗೆ ಗುಂಡು ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದ ಕಾಸರಗೋಡು ಮೂಲದ ಅಬ್ದುಲ್ಲಾ (40) ಗುಂಡೇಟಿನಿಂದ ಗಾಯಗೊಂಡ ಆರೋಪಿ.

ಬುಧವಾರ ಮುಂಜಾನೆ ಈಶ್ವರಮಂಗಳ ಭಾಗದಲ್ಲಿ ಅಬ್ದುಲ್ಲಾ ಎಂಬಾತ ಚಲಾಯಿಸುತ್ತಿದ್ದ ಐಷರ್ ವಾಹನದಲ್ಲಿ ಸುಮಾರು 10 ಜಾನುವಾರುಗಳನ್ನು ಅನಧಿಕೃತವಾಗಿ ಸಾಗಿಸಲಾಗುತ್ತಿತ್ತು. ವಾಹನದಲ್ಲಿ ಇನ್ನೊಬ್ಬ ಆರೋಪಿಯೂ ಇದ್ದನು. ಈ ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದಾಗ ಚಾಲಕ ಅಬ್ದುಲ್ಲಾ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ.ಸುಮಾರು 10 ಕಿ.ಮೀ. ದೂರದವರೆಗೆ ಪೊಲೀಸರು ವಾಹನವನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಆರೋಪಿಯು ಪೊಲೀಸರ ಜೀಪಿಗೆ ಹಿಂಬದಿಯಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ.
ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಪಿಎಸ್‌ಐ ಅವರು ಆತ್ಮರಕ್ಷಣೆ ಹಾಗೂ ಆರೋಪಿಯನ್ನು ಹಿಡಿಯುವ ಸಲುವಾಗಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅದರಲ್ಲಿ ಒಂದು ಗುಂಡು ಐಷರ್ ವಾಹನದ ಮೇಲೆ ಬಿದ್ದರೆ, ಮತ್ತೊಂದು ಗುಂಡು ಚಾಲಕ ಅಬ್ದುಲ್ಲಾ ಕಾಲಿಗೆ ತಗುಲಿದೆ. ಗುಂಡೇಟಿನಿಂದ ವಾಹನ ನಿಂತ ಕೂಡಲೇ ಅದರಲ್ಲಿದ್ದ ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಾಯಗೊಂಡ ಆರೋಪಿ ಅಬ್ದುಲ್ಲಾನನ್ನು ತಕ್ಷಣವೇ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆರೋಪಿ ಅಬ್ದುಲ್ಲಾ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ಕಾಯ್ದೆಯಡಿಯಲ್ಲಿಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಪರಾರಿಯಾದ ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Related posts

Leave a Comment