ಉಡುಪಿ: ಸೈಫ್ ಯಾನೆ ಸೈಫುದ್ದಿನ್ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಎಸ್.ಪಿ ಹರಿರಾಮ್ ಶಂಕರ್ ಪತ್ರಿಕಾ ಸುದ್ದಿಘೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಸೆ.27ರಂದು ಎಕೆಎಂಎಸ್ ಬಸ್ ಮಾಲೀಕ ರೌಡಿಶೀಟರ್ ಸೈಫುದ್ದಿನ್‌ನನ್ನು ಆತನ ಸ್ವಗೃಹದಲ್ಲೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಹಣದ ವಿಚಾರಕ್ಕೆ ಹನಿಟ್ರ್ಯಾಪ್ ಅಸ್ತ್ರ ಬಳಸಿ ಹೆಣವನ್ನು ಉರುಳಿಸಿದ್ದಾರೆ ಎನ್ನುವಂತದ್ದು ಬೆಳಕಿಗೆ ಬಂದಿದೆ.
ಉಡುಪಿ ಎಸ್.ಪಿ ಹರಿರಾಮ್ ಶಂಕರ್ ನೀಡಿದ ಮಾಹಿತಿಯ ಪ್ರಕಾರ, ಆರೋಪಿಯಾಗಿರುವ ಫೈಜಲ್ ತನ್ನ ಹೆಂಡತಿ ರಿಧಾ ಶಬಾನಳನ್ನ ಮನೆಗೆ ಕರೆದುಕೊಂಡು ಬರುವುದಾಗಿ ತಿಳಿಸಿದ್ದು, ಸೈಫುದ್ದಿನ್‌ಗೆ ಕೊಡವೂರಿನ ಮನೆಗೆ ಬರುವಂತೆ ಆಹ್ವಾನ ನೀಡಿದ್ದ.ಇನ್ನುಳಿದ ಇಬ್ಬರು ಆರೋಪಿಗಳು ಕೊಡವೂರಿನ ಮನೆಯ ಬಳಿ ರಹಸ್ಯವಾಗಿ ಅಡಗಿ ಕುಳಿತಿದ್ದರು.
ಸೈಫ್ ರೌಡಿಶೀಟರ್ ಆಗಿದ್ದರಿಂದ ಆತನಿಗೆ ಹಲವು ಬೆದರಿಕೆಗಳಿದ್ದವು, ಹಾಗಾಗಿ ಆತ ಒಬ್ಬನೇ ತೆರಳುವಂತದ್ದು ವಿರಳ. ಇಲ್ಲಿ ಹನಿಟ್ರ್ಯಾಪ್ ದಾಳ ಉರುಳಿಸಿ ಆತ ಒಬ್ಬನೇ ಬಂದಂತಹ ವೇಳೆಯಲ್ಲಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಇಲ್ಲಿ ರಿಧಾ ಶಬಾನ ಕಳೆದ ಒಂದು ವರ್ಷದಿಂದ ಸೈಫುದ್ದಿನ್ ಜೊತೆ ಸಂಪರ್ಕ ಹೊಂದಿದ್ದಾಳೆ ಎನ್ನುವಂತದ್ದು ಕುತೂಹಲಕಾರಿ ಸಂಗತಿ.
ಮುಂದುವರೆದು ಪ್ರಕರಣ ಇನ್ನು ತನಿಖೆಯ ಹಂತದಲ್ಲಿದೆ. ಈ ನಾಲ್ವರು ಆರೋಪಿಗಳಲ್ಲದೇ ಇವರ ಹಿಂದೆ ಇನ್ನಷ್ಟು ಆರೋಪಿಗಳು ಇರುವ ಶಂಕೆ ಇದೆ ಹಾಗಾಗಿ ಹೆಚ್ಚಿನ ಮಾಹಿತಿ ನೀಡಿದಲ್ಲಿ ತನಿಖೆಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ. ಮಾಹಿತಿಗಳ ಪ್ರಕಾರ ಸೈಫುದ್ದಿನ್ ಸಿಂಡಿಕೇಟ್ ವಿದೇಶಗಳಲ್ಲೂ ಹಬ್ಬಿಕೊಂಡಿದ್ದು,ಸ್ಥಳೀಯ ಮಟ್ಟದಲ್ಲಿ ಹಲವು ಹೆಸರುಗಳು ಪ್ರಕರಣದಲ್ಲಿ ಸದ್ದುಮಾಡುತ್ತಿದೆ.