ಕೋಟ : ತೆಂಗಿನ ತೋಟದಲ್ಲಿ ಕಾಯಿ ಕೊಯ್ದು ಸಾಗಾಟ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕ ಮಳೆಯಿಂದ ನೀರು ತುಂಬಿದ್ದ ತೋಡಿಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಬೇಳೂರು ಗ್ರಾಮದ ಚಾಮ್ತಾಡಿ ಕೈಲೇರಿ ಸಮೀಪ ನಡೆದಿದೆ.
ಅಚ್ಲಾಡಿ ಅಂಬೇಡ್ಕರ್ ಕಾಲನಿ ನಿವಾಸಿ ಶರತ್ (32) ಮೃತಪಟ್ಟವ. ಈತ ಸಹೋದರಿ, ತಾಯಿಯನ್ನು ಅಗಲಿದ್ದಾನೆ.
ಇವನು ಮನೆ ಸಮೀಪದ ತೆಂಗಿನಕಾಯಿ ಗುತ್ತಿಗೆದಾರರ ಜತೆ ಅಚ್ಲಾಡಿಯ ತೋಟವೊಂದಕ್ಕೆ ಕೆಲಸಕ್ಕೆ ತೆರಳಿದ್ದು ಮರದಿಂದ ಕಾಯಿ ಕೊಯ್ದು ಟೆಂಪೋಗೆ ಲೋಡ್ ಮಾಡುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಹಾಗೂ ಎಲ್ಲ ಕಡೆ ಹುಡಯಕಿದರು ಪತ್ತೆಯಾಗಿರಲಿಲ್ಲ. ಅನಂತರ ಗುರುವಾರ ಅಪರಾಹ್ನ ಕೈಲೇರಿ ಸಮೀಪ ತೋಡಿನಲ್ಲಿ ಈತನ ಶವ ಪತ್ತೆಯಾಗಿದೆ. ಬುಧವಾರ ವಿಫರೀತ ಮಳೆ ಇದ್ದ ಕಾರಣ ತೋಡು ತುಂಬಿ ಹರಿಯುತ್ತಿತ್ತು. ಈ ಭಾಗದಲ್ಲಿ ರಸ್ತೆ ಕೂಡ ಮಳೆಯಿಂದ ಕೆಸರುಮಯವಾಗಿದ್ದು ಸಂಚರಿಸಲು ಅಸಾಧ್ಯ ಸ್ಥಿತಿ ಇದೆ. ಹೀಗಾಗಿ ಕಾಯಿ ಕೊಯ್ದು ಟೆಂಪೋಗೆ ಸಾಗಿಸುತ್ತಿದ್ದ ಶರತ್ ಕಾಲು ಜಾರಿ ತೋಡಿಗೆ ಬಿದ್ದಿದ್ದು ಯಾರೂ ಗಮನಿಸದೆ ಮುಳುಗಿ ಮೃತಪಟ್ಟಿದ್ದಾನೆ.
ಈಶ್ವರ ಮಲ್ಪೆ, ಅಗ್ನಿಶಾಮಕ ವ್ಯಾಪಕ ಕಾರ್ಯಚರಣೆ: ಕೆಲಸ ಮಾಡುತ್ತಿದ್ದ ಸ್ಥಳದ ಪಕ್ಕದಲ್ಲೇ ಹೊಳೆಗೆ ಇದ್ದ ಕಾರಣ ಹೊಳೆಗೆ ಬಿದ್ದಿರಬಹುದು ಎಂದು ಅಂದಾಜಿಸಿ ಬುಧವಾರ ರಾತ್ರಿ ತನಕ ಹಾಗೂ ಗುರುವಾರ ಶವ ದೊರೆಯುವ ತನಕ ಹೊಳೆಯಲ್ಲಿ ವ್ಯಾಪಕ ಶೋಧ ನಡೆಸಲಾಯಿತು. ಈಶ್ವರ ಮಲ್ಪೆಯವರು ಹಾಗೂ ಅಗ್ನಿಶಾನಕ ತಂಡ ಸಾಕಷ್ಟು ಪ್ರಯತ್ನಪಟ್ಟಿತ್ತು. ನಾಗರಾಜ್ ಜೀವನ್ ಮಿತ್ರ ಹಾಗೂ ಸ್ಥಳೀಯರು ಇವರಿಗೆ ಸಹಕಾರ ನೀಡಿದರು. ಗುರುವಾರ ಬೆಳಗ್ಗೆ ಕೂಡ ಇದೇ ತಂಡದಿಂದ ಶೋಧ ಮುಂದುವರಿದಿತ್ತು.
ಘಟನಾ ಸ್ಥಳಕ್ಕೆ ಕೋಟ ಠಾಣೆ ಉಪನಿರೀಕ್ಷಕ ಪ್ರವೀಣ್ ಕುಮಾರ್, ಎ.ಎಸ್.ಐ. ರವಿ ಕುಮಾರ್ ಮತ್ತು ಸಿಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.