ಕಾರ್ಕಳ : ಮದುವೆ ಸಂದರ್ಭದಲ್ಲಿ ತನ್ನ ಮಗಳಿಗೆ ಕಾಯಿಲೆಯ ವಿಚಾರ ಮರೆಮಾಚಿ ಮದುವೆ ಮಾಡಿಸಿದ್ದಾರೆ ಎಂಬ ಆರೋಪದ ಮೇರೆಗೆ ಅಳಿಯನೇ ತನ್ನ ಮಾವ ಮತ್ತು ಅವರ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರಿನ ಹಿನ್ನೆಲೆಯಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹೊಸ್ಮಾರು ಹೊಯಿಗೆಹಿತ್ಲು ನಿವಾಸಿ ಚೇತನ್ ಹೆಗ್ಡೆ ಎಂಬವರು ತನಗೆ ಹೆಣ್ಣು ಕೊಟ್ಟ ಮಾವ ಕರುಣಾಕರ ಹೆಗ್ಡೆ ಮತ್ತು ಅವರ ಕುಟುಂಬದ ವಿರುದ್ಧ ವಂಚನೆ ಕುರಿತು ದೂರು ನೀಡಿದ್ದಾರೆ.
ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹೊಸ್ಮಾರ್ ಹೊಯಿಗೆಹಿತ್ಲು ನಿವಾಸಿ ಚೇತನ್ ಹೆಗ್ಡೆ (34) ಎಂಬವರು ಕಳೆದ 2018ರ ಡಿಸೆಂಬರ್21 ರಂದು ಬೆಳ್ತಂಗಡಿ ಗ್ರಾಮದ ವೇಣೂರಿನ ಬಾಜಿರೆ ಗ್ರಾಮದ ಕರುಣಾಕರ ಹೆಗ್ಡೆ ಹಾಗೂ ವಿನೋದ ಹೆಗ್ಡೆ ದಂಪತಿ ಪುತ್ರಿ ವಿನೀತಾ ಅವರನ್ನು ಮದುವೆಯಾಗಿದ್ದರು. ಮದುವೆ ಬಳಿಕ 2022ರಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು. ಮದುವೆ ಮುನ್ನವೇ ವಿನೀತರವರಿಗೆ ಕಣ್ಣಿನ ಸಮಸ್ಯೆ ಇದ್ದು ಪತಿ ಚೇತನ್ ಸಾಕಷ್ಟು ಚಿಕಿತ್ಸೆ ಕೊಡಿಸಿದರೂ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಇದಲ್ಲದೇ ಚಿಕಿತ್ಸೆ ಸಂದರ್ಭದಲ್ಲಿ ಪತ್ನಿ ವಿನೀತಾರಿಗೆ ಮೆದುಳಿನ ಕ್ಯಾನ್ಸರ್ ಇರುವ ಬಗ್ಗೆ ಪತಿ ಚೇತನ್ ಗೆ ತಿಳಿದುಬಂದಿದೆ. ಆದರೆ ಚೇತನ್ ಪತ್ನಿಗೆ ಸಾಕಷ್ಟು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ವಿನೀತಾ 2023ರ ಡಿಸೆಂಬರ್ 18 ರಂದು ಮೃತಪಟ್ಟಿದ್ದರು.
ತನ್ನ ಮಗಳು ವಿನೀತಾರಿಗೆ ಕಾಯಿಲೆ ಇರುವ ವಿಚಾರ ಮರೆಮಾಚಿ ಮೋಸ ಮಾಡುವ ಉದ್ದೇಶದಿಂದ ಚೇತನ್ ಹೆಗ್ಡೆಯವರಿಗೆ ಮದುವೆ ಮಾಡಿಕೊಟ್ಟು ವಂಚಿಸಿದ್ದಾರೆ ಎಂದು ಚೇತನ್ ಹೆಗ್ಡೆ ದೂರಿನಲ್ಲಿ ತಿಳಿಸಿದ್ದಾರೆ. ಪತ್ನಿ ವಿನೀತಾ ಮೃತಪಟ್ಟ ಬಳಿಕ ಮದುವೆ ಸಂದರ್ಭದಲ್ಲಿ ಕೊಟ್ಟಿದ್ದ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಆಕೆಯ ತಂದೆ ಕರುಣಾಕರ ಹೆಗ್ಡೆ ಮತ್ತು ಪತ್ನಿ ಹಾಗೂ ಕುಟುಂಬದ ಸದಸ್ಯರು ಮರಳಿ ಪಡೆದು ಬಳಿಕ ವಾಪಸು ಕೊಡದೇ ಮೋಸ ಮಾಡಿದ್ದಾರೆ ಎಂದು ಚೇತನ್ ಹೆಗ್ಡೆ ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.