ಕುಂದಾಪುರ : ಕನ್ನಡ ಮಾಧ್ಯಮ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿರುವ ಪತ್ರಕರ್ತ, ನಿರೂಪಕ, ರಾಷ್ಟ್ರಭಕ್ತ ವ್ಯಕ್ತಿತ್ವ – ರಂಜಿತ್ ಶಿರಿಯಾರ. ವೃತ್ತಿಯ ಬಗ್ಗೆ ಶ್ರದ್ಧೆ, ನೈತಿಕತೆ, ಸ್ಥಿರವಾದ ಸೈದ್ದಾಂತಿಕ ನಿಲುವು ಮತ್ತು ದೇಶಪ್ರೇಮದ ಭಾವದಿಂದ ಅವರು ಇಂದು ಕನ್ನಡಿಗರ ಮನ ಗೆದ್ದಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಶಿರಿಯಾರ ಗ್ರಾಮದಲ್ಲಿ ಬಡಕುಟುಂಬದಲ್ಲಿ ಜನಿಸಿದ ರಂಜಿತ್ ಅವರ ತಂದೆ ನಾರಾಯಣ ಕುಲಾಲ್, ತಾಯಿ ಬಾಬಿ. ಚಿಕ್ಕಂದಿನಿಂದಲೇ ಸಂಘದ ಗರಡಿಯಲ್ಲಿ ಬೆಳೆದು, ಸಂಘದ ಶಿಕ್ಷಣದಿಂದ ವ್ಯಕ್ತಿತ್ವವನ್ನು ನಿರ್ಮಿಸಿಕೊಂಡರು. ಮೊಳಹಳ್ಳಿ, ಶಿರಿಯಾರ, ಕಾವಡಿ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ, ಬಳಿಕ ಬಿಕಾಂ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದರು. ವಿದ್ಯಾರ್ಥಿ ಜೀವನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ನಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಸರ್ವಕಾಲೇಜು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ನಾಯಕತ್ವ ಗುಣಗಳು, ಸಂಘಟನಾ ಶಕ್ತಿ, ಸಾರ್ವಜನಿಕ ಜೀವನದ ಅರಿವು ಈ ಅವಧಿಯಲ್ಲೇ ಬೆಳಕಿಗೆ ಬಂದವು.
ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ರಂಜಿತ್, ತನ್ನ ವೃತ್ತಿಜೀವನವನ್ನು TV7 ವಾಹಿನಿಯಿಂದ ಪ್ರಾರಂಭಿಸಿ, ನಂತರ News X, Btv Kannadaಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು. ಇಂದಿಗೆ ಅವರು ರಿಪಬ್ಲಿಕ್ ಕನ್ನಡದ ಹಿರಿಯ ನಿರೂಪಕ ಹಾಗೂ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ ಸ್ಟುಡಿಯೋದಲ್ಲಿಯೇ ಕುಳಿತು ಸುದ್ದಿಯನ್ನು ಹೇಳುವುದಲ್ಲದೆ, ದೇಶದಾದ್ಯಂತ ನಡೆದ ಪ್ರಮುಖ ಘಟನೆಗಳ ಸ್ಥಳಕ್ಕೇ ಧಾವಿಸಿ ನೇರ ವರದಿ ಮಾಡುವ ಧೈರ್ಯಶಾಲಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ. ವಯನಾಡು ದುರಂತ, ದೆಹಲಿ ಲೋಕಸಭಾ ಚುನಾವಣೆ, ಪ್ರಯಾಗ್ ರಾಜ್ ಮಹಾಕುಂಭಮೇಳ ಮುಂತಾದ ಪ್ರಮುಖ ಘಟನೆಗಳಲ್ಲಿ ನೇರ ಕವರೇಜ್ ನೀಡಿ, “ರಾಷ್ಟ್ರಪ್ರೇಮಿ ವರದಿಗಾರ” ಎಂಬ ಹೆಸರು ಗಳಿಸಿದ್ದಾರೆ. ವಿಶೇಷವಾಗಿ, ಮಹಾಕುಂಭಮೇಳದ ಸಂಪೂರ್ಣ ವರದಿ ಮಾಡಿದ ಮೊದಲ ಕನ್ನಡ ಪತ್ರಕರ್ತ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಕಾಶ್ಮೀರದ ಪೆಹಲ್ಗಾಂನಲ್ಲಿ ಉಗ್ರಗಾಮಿ ದಾಳಿ ನಡೆದ ಸಂದರ್ಭದಲ್ಲಿ, ಎಲ್ಲರೂ ಹಿಂದಿರುಗುತ್ತಿದ್ದಾಗ, ರಂಜಿತ್ ಒಂಟಿಯಾಗಿ ಕಾಶ್ಮೀರಕ್ಕೆ ತೆರಳಿ ನೇರವಾಗಿ ವರದಿ ಮಾಡಿದ ಸಾಹಸ ಮಾಧ್ಯಮ ಲೋಕದಲ್ಲಿ ಅಪೂರ್ವ. ಪರಿಚಯವಿಲ್ಲದ ನೆಲ, ಅಜ್ಞಾತ ಜನ, ಭಾಷೆಯ ಅಡಚಣೆ, ಜೀವಾಪಾಯದ ಭೀತಿ – ಇವೆಲ್ಲದರ ಮಧ್ಯೆಯೂ ತಮ್ಮ ದೇಶಪ್ರೇಮ ಮತ್ತು ವೃತ್ತಿ ನಿಷ್ಠೆಯೊಂದಿಗೆ ವರದಿ ಮಾಡಿದ ಧೈರ್ಯವು ಅವರನ್ನು ಇನ್ನಷ್ಟು ವಿಶಿಷ್ಟರನ್ನಾಗಿಸಿದೆ. ಸ್ಥಳೀಯರಿಂದ ವಿರೋಧ, ಉಗ್ರರ ಅಡಗು ತಾಣಗಳಿಗೆ ಪ್ರವೇಶ, ಪಂಡಿತರ ಸಂಕಷ್ಟಗಳ ದಾಖಲಾತಿ – ಈ ಎಲ್ಲವನ್ನು ತಮ್ಮದೇ ಶೈಲಿಯಲ್ಲಿ ನೇರವಾಗಿ ಜನತೆಗೆ ತಲುಪಿಸಿದರು. ಈ ಸಾಹಸವು ಕೇವಲ ಪತ್ರಿಕೋದ್ಯಮವಲ್ಲ, ಅದು ರಾಷ್ಟ್ರಕ್ಕಾಗಿ ಮಾಡಿದ ಅರ್ಪಣೆ.