ಪಡುಬಿದ್ರಿ: ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ತೆಗೆಸಿಕೊಡುವುದಾಗಿ ಅಮಾಯಕ ಜನರಲ್ಲಿ ಕಮಿಷನ್ ಪಡೆಯುವ ಬಗ್ಗೆ ಬೆಳಪು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ “ಹಣಕಾಸು ಸೇರ್ಪಡೆ ಪರಿಪೂರ್ಣ ಅಭಿಯಾನ” ಕಾರ್ಯಕ್ರಮದಲ್ಲಿ ಆರ್ಬಿಐನ ರೀಜನಲ್ ಡೈರೆಕ್ಟರ್ ಸಹಿತ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಸೇರಿದ ಸಭೆಯಲ್ಲಿ ಬೆಳಪು ಗ್ರಾ.ಪಂ. ಅಧ್ಯಕ್ಷರು ಸಹಿತ ಗ್ರಾಮಸ್ಥರು ಅಧಿಕಾರಿಗಳಲ್ಲಿ ದೂರಿದ್ದಾರೆ.
ಬೆಳಪು ಗ್ರಾಮದ ತನ್ನ ಮನೆಯಲ್ಲೇ ಬಹುತೇಕ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳ ಕೌಂಟರ್ ಹಾಕಿಕೊಂಡು ಸಿಬ್ಬಂದಿಗಳನ್ನು ನೇಮಿಸಿ ಸಾಲಕ್ಕೆ ಅರ್ಜಿ ಹಾಕಿದಾಗಲೇ ನಿಗದಿತ ಕಮಿಷನ್ ನೀಡಬೇಕು ಅದಕ್ಕೆ ಯಾವುದೇ ರಶೀದಿ ನೀಡುವುದಿಲ್ಲ, ಪಾಸ್ ಪುಸ್ತಕ ನಮಗೆ ನೀಡುತ್ತಿಲ್ಲ, ಸಾಲ ಮರು ಪಾವತಿಗೂ ನಮಗೆ ರಶೀದಿ ನೀಡುವುದಿಲ್ಲ ಅಲ್ಲದೆ ಉಳಿತಾಯ ಎಂಬುದಾಗಿ ಗ್ರಾಹಕರಿಂದ ಪಡೆಯುವ ಹಣವನ್ನು ಹಿಂದಿರುಗಿಸ ಬೇಕಾಗಿದ್ದರೂ ಇದೀಗ ಬಡ್ಡಿ ಜಾಸ್ತಿಯಾಗಿದೆ ಎಂಬ ನೆಪ ಹೇಳಿ ಅದರಲ್ಲೂ ನಮ್ಮ ಹಣಕ್ಕೆ ಕತ್ತರಿ ಹಾಕುತ್ತಾರೆ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆರ್ಬಿಐ ನ ರೀಜ್ಹನಲ್ ಡೈರೆಕ್ಟರ್ ಸೋನಲಿ ಸೀ ಗುಪ್ತ ಅವರಲ್ಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಸಿದ ಅಧಿಕಾರಿ ಯಾವುದೇ ಕಾರಣಕ್ಕೆ ಬ್ಯಾಂಕ್ ಸಾಲಕ್ಕೆ ಮೂರನೇ ವ್ಯಕ್ತಿಯ ಅಗತ್ಯವಿಲ್ಲ, ಅದಕ್ಕಾಗಿ ಅಮಾಯಕ ಜನರನ್ನು ವಂಚಿಸಿ ಕಮಿಷನ್ ಪಡೆಯುವುದು ಅಪರಾಧ, ಈ ವಂಚನೆಯ ಬಗ್ಗೆ ದೂರು ನೀಡಿದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದರು.
ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಬೆಳಪು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಇಂಥಹ ವ್ಯವಸ್ಥೆಯಿಂದ ಅಮಾಯಕ ಜನರು ವಂಚನೆಗೊಳಗಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಗ್ರಾಮಸ್ಥರೊಂದಿಗೆ ಆಗ್ರಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಈ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ ಎಂದಾಗ ಆಕ್ರೋಶಗೊಂಡ ಗ್ರಾಮಸ್ಥರು, ನಿಮ್ಮ ಸಹಕಾರ ಇಲ್ಲದೆ ಇದು ನಡೆಯಲು ಸಾಧ್ಯವೇ..? ಈಗಲಾದರೂ ತಿಳಿಯಿತಲ್ಲ ಕ್ರಮ ಕೈಗೊಳ್ಳಿ ಆ ಮನೆಯನ್ನು ನಾವು ತೋರಿಸುತ್ತೇವೆ ನಮ್ಮೊಂದಿಗೆ ಬನ್ನಿ ಎಂಬುದಾಗಿ ಗ್ರಾಮಸ್ಥರು ಒತ್ತಾಯಿಸಿದಾಗ, ಅಧಿಕಾರಿಗಳು ಮೌನವಾಗಿದ್ದು ಗಮನಿಸಿದಾಗ ಎಲ್ಲವೂ ಸರಿಯಿಲ್ಲ ಎಂಬುದು ಇಲ್ಲಿ ರುಜುವಾತು ಆಗಿದೆ.
