ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಕೂರು ಮುಲ್ಲಡ್ಕದ ಮನೆಯೊಂದರ ತೋಟದ ಶೆಡ್‌ನಲ್ಲಿಟ್ಟಿದ್ದ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಆಗಸ್ಟ್ 23ರ 2025ರಂದು ಸಂಭವಿಸಿದ್ದ ಕಳವು ಪ್ರಕರಣದ ತನಿಖೆ ವೇಳೆ, ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಅವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್ಐ ಪ್ರಸನ್ನ, ಎಎಸ್‌ಐ ಸುಂದರ ಗೌಡ ಹಾಗೂ ಸಿಬ್ಬಂದಿಗಳಾದ ರುದ್ರೇಶ್, ಚಂದ್ರಶೇಖರ, ಮಹಾಂತೇಶ್ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ಸಿಬ್ಬಂದಿಗಳಾದ ದಿನೇಶ್, ನಿತಿನ್ ಸೇರಿ ತಂಡ ಕಾರ್ಯಾಚರಣೆ ನಡೆಸಿತು.
ಪೊಲೀಸರು ಆರೋಪಿಗಳಿಂದ 5ಲಕ್ಷ ರೂ. ಮೌಲ್ಯದ 1100 ಕೆ.ಜಿ. ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಕಾನೂನು ಸಂಘರ್ಷಕ್ಕೆ ಒಳಪಟ್ಟಿರುವುದರಿಂದ ಅವರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.
ಈ ಕಾರ್ಯಾಚರಣೆಯು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ಮತ್ತು ಸಹಾಯಕ ಪೊಲೀಸ್ ಅಧೀಕ್ಷಕರಾದ ಹರ್ಷಾ ಪ್ರಿಯಂವದ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ ನಡೆದಿದೆ.