ಶಿರಸಿ: ನಗರದ ಸಮೀಪ ಆಟವಾಡುತ್ತಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಏರ್‌ಗನ್ ಟ್ರಿಗರ್ ಅದುಮಿದ ಪರಿಣಾಮ ಮತ್ತೋರ್ವ ಬಾಲಕನಿಗೆ ಗುಂಡು ತಗಲಿ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಸೋಮನಹಳ್ಳಿಯಲ್ಲಿ ಸಂಭವಿಸಿದೆ.
ಬಾಲಕನಿಗೆ ಗುಂಡು ತಗಲಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಮನಳ್ಳಿಯ ರಾಘವೇಂದ್ರ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ಬಸಪ್ಪ ಉಂಡಿಯರ್ ಎಂಬುವವರ ಇಬ್ಬರು ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಒಂಭತ್ತು ವರ್ಷದ ಕರಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಘವೇಂದ್ರ ಹೆಗಡೆ ಸೇರಿದಂತೆ ಸೋಮನಳ್ಳಿಯ ಅಡಿಕೆ ತೋಟದಲ್ಲಿ ಮಂಗನ ಕಾಟ ತಪ್ಪಿಸಲು ನಿತಿಶ್ ಗೌಡ ಎಂಬುವರು ಏರ್ ಗನ್ ಮೂಲಕ ತೋಟ ಕಾಯುತ್ತಿದ್ದರು. ಕಾರಣ ಶುಕ್ರವಾರ ಬೆಳಿಗ್ಗೆಯೂ ತೋಟ ಕಾದು ಮೊಬೈಲ್ ಕರೆನ್ಸಿ ಹಾಕಿಕೊಳ್ಳಲು ಗಣಪತಿ ಹೆಗಡೆ ಮನೆಗೆ ಹೋಗಿದ್ದಾರೆ. ಅಲ್ಲಿ ಈದ್ ಮಿಲಾದ್ ರಜೆಯ ಕಾರಣ ಆಟವಾಡುತ್ತಿದ್ದ ಮೂವರು ಮಕ್ಕಳು ಬಂದಿದ್ದು, ಆ ವೇಳೆ ಕರಿಯಪ್ಪ ತಮ್ಮ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದಾನೆ. ಇದರಿಂದ ಗುಂಡು ಕರಿಯಪ್ಪ ಎದೆಗೆ ತಾಗಿದ್ದು, ತಕ್ಷಣ ಮೃತಪಟ್ಟಿದ್ದಾನೆ ಎಂದು ಮನೆ ಮಾಲೀಕ ಗಣಪತಿ ಹೆಗಡೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆತ ಬದುಕುಳಿದಿಲ್ಲ ಎನ್ನಲಾಗಿದೆ.
ಶಿರಸಿ ಗ್ರಾಮೀಣ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.