ಮುಂಬೈ: 17 ವರ್ಷಗಳ ಹಿಂದೆ ಮಹಾರಾಷ್ಟ್ರದ
ಮಾಲೆಗಾಂವ್‌ನಲ್ಲಿ ನಡೆದಿದ್ದ ಸ್ಪೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿ ಎಲ್ಲಾ ಏಳು ಮಂದಿಯನ್ನು ನಿರ್ದೋಷಿ ಎಂದು ಗುರುವಾರ (ಜು.31) ಕೋರ್ಟ್ ಹೇಳಿದೆ.
ವಿಶೇಷ ತನಿಖಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ.ಲಾಹೋಟಿ ಅವರು ಕೇವಲ ಅನುಮಾನದಿಂದ ಪ್ರಕರಣವನ್ನು ಮುಂದುವರಿಸಲು ಸಾಧ್ಯವಿಲ್ಲ ಮತ್ತು ಆರೋಪಿಗಳ ವಿರುದ್ಧದ ಆರೋಪಗಳನ್ನು ಅನುಮಾನ ಮೀರಿ ಸ್ಥಾಪಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಪ್ರತಿಪಾದಿಸಿದರು.
“ಸಮಾಜದ ವಿರುದ್ಧ ಗಂಭೀರ ಘಟನೆ ನಡೆದಿದೆ. ಆದರೆ ನ್ಯಾಯಾಲಯವು ಕೇವಲ ನೈತಿಕ ಆಧಾರದ ಮೇಲೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶರು ಹೇಳಿದರು.
2008ರ ಸೆಪ್ಟೆಂಬರ್ 29 ರಂದು ಗಣನೀಯ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮಾಲೆಗಾಂವ್ ಪಟ್ಟಣದಲ್ಲಿ ಮೋಟಾರ್ ಸೈಕಲ್‌ಗೆ (ಎಲ್‌ಎಂಎಲ್ ಫ್ರೀಡಂ ಬೈಕ್) ಜೋಡಿಸಲಾದ ಸ್ಫೋಟಕ ಸಾಧನವು ಸ್ಫೋಟಗೊಂಡು ಆರು ಜನರು ಸಾವನ್ನಪ್ಪಿದ್ದರು. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪವಿತ್ರ ರಂಜಾನ್ ತಿಂಗಳಲ್ಲಿ ಈ ಸ್ಫೋಟ ಸಂಭವಿಸಿತ್ತು.
ಈ ಪ್ರಕರಣವನ್ನು ಆರಂಭದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ತನಿಖೆ ನಡೆಸಿತು, ನಂತರ 2011 ರಲ್ಲಿ ಎನ್‌ಐಎಗೆ ವರ್ಗಾಯಿಸಲಾಯಿತು. ಈ ಸ್ಫೋಟವು ಅಭಿನವ್ ಭಾರತ್ ಗುಂಪನ್ನು ಒಳಗೊಂಡ ಪಿತೂರಿಯ ಭಾಗವಾಗಿದೆ ಎಂದು ಎನ್‌ಐಎ ಆರೋಪಿಸಿದೆ.