Mangalore and Udupi news
Blog

ಶಿರ್ವ : ಮಗು ಮಾರಾಟ ಜಾಲ ಪತ್ತೆ : ಮಹಿಳೆ ಸಹಿತ ಮೂವರ ಸೆರೆ…!!

ಕಾಪು: ಕಾಪು ತಾಲೂಕಿನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗು ಮಾರಾಟ ಜಾಲವೊಂದು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸಹಿತ ಮೂವರು ಆರೋಪಿಗಳನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಡಾ.ಸೋಮೇಶ್ ಸೊಲೊಮನ್, ವಿಜಯಲಕ್ಷ್ಮೀ ಯಾನೆ ವಿಜಯ, ನವನೀತ್ ನಾರಾಯಣ ಎಂದು ಗುರುತಿಸಲಾಗಿದೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಸತ್ಯ ಒಪ್ಪಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಕಾಪುವಿನ ಹೇರೂರು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪ್ರಭಾವತಿ ಮತ್ತು ಆಕೆಯ ಪತಿ ರಮೇಶ್ ಮೂಲ್ಯ ದಂಪತಿಗಳು 4 ದಿನದ ಶಿಶುವನ್ನು ಪೋಷಣ್ ಟ್ರ್ಯಾಕರ್ ನಲ್ಲಿ ರಿಜಿಸ್ಟರ್ ಮಾಡಲು ಅಂಗನವಾಡಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪರಿಶಿಲಿಸಿದಾಗ ಮಗು ದಂಪತಿಗಳಿಗೆ ಸೇರಿದ್ದು ಅಲ್ಲ ಎಂಬ ಬಗ್ಗೆ ಅಂಗನವಾಡಿ ಕಾರ್ಯಕರ್ತೆಗೆ ಅನುಮಾನ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಮಂಗಳೂರಿನ Colaco ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಗೆ ಹೆರಿಗೆಯಾಗಿದ್ದು, ಅವರಿಗೆ ಹಣ ನೀಡಿ ಆಸ್ಪತ್ರೆಯ ಮುಖಾಂತರ ಮಗುವನ್ನು ಪಡೆದುಕೊಂಡು ಬಂದಿರುವ ಮಾಹಿತಿಯನ್ನು ದಂಪತಿಗಳು ತಿಳಿಸಿದ್ದಾರೆ.

ಬಳಿಕ ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಭಾವತಿಯವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಆ.03 ರಂದು ಜನಿಸಿದ ಮಗುವನ್ನು ಮಂಗಳೂರಿನ Colaco ಆಸ್ಪತ್ರೆಯ ವೈದ್ಯರು ತಮಗೆ ನೀಡಿರುವುದಾಗಿ ಮತ್ತು ಪ್ರಭಾವತಿರವರ ಚಿಕ್ಕಮ್ಮನ ಮಗಳು ಪ್ರಿಯಾಂಕರವರು ಮಗುವಿನ ಹೆರಿಗೆಯಾಗುವ ಬಗ್ಗೆ ವಿಚಾರವನ್ನು ತಿಳಿಸಿ ಆಸ್ಪತ್ರೆಯ ವೈದ್ಯರ ಮುಖಾಂತರ ರೂ 4.5 ಲಕ್ಷ ಹಣವನ್ನು ನೀಡಿ ಮಗುವನ್ನು ಪಡೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ.

Related posts

Leave a Comment