ಧರ್ಮಸ್ಥಳ: ಮಹೀಂದ್ರ & ಮಹೀಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ ಬಿ.ಇ. ೬ ಕಾರನ್ನು ಭಾನುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಕೊಡುಗೆಯಾಗಿ ಅರ್ಪಿಸಿದೆ.
ಹೊಸ ಮಾದರಿಯ ವಾಹನ ತಯಾರಾದ ಕೂಡಲೆ ಅದನ್ನು ಕಾಣಿಕೆಯಾಗಿ ಧರ್ಮಸ್ಥಳಕ್ಕೆ ಅರ್ಪಿಸುವುದು ಕಂಪೆನಿಯ ಸಂಪ್ರದಾಯವಾಗಿದೆ. ಈ ಹಿಂದೆಯೂ ಕಂಪೆನಿ ಧರ್ಮಸ್ಥಳಕ್ಕೆ ನೂತನ ಮಾದರಿಯ ಕಾರನ್ನು ಕೊಡುಗೆಯಾಗಿ ನೀಡಿದೆ.
ವೀರೇಂದ್ರ ಹೆಗ್ಗಡೆಯವರು ಕಾರನ್ನು ಚಾಲನೆ ಮಾಡಿ ಶುಭ ಹಾರೈಸಿದರು.ಹೊಸ ಕಾರಿನ ಕೀಯನ್ನು ಕಂಪೆನಿಯ ಉತ್ಪದನಾ ವಿಭಾಗದ ಮುಖ್ಯಸ್ಥ ವಿನಯ್ ಖಾನೋಲ್ಕರ್ ಹಸ್ತಾಂತರಿಸಿದರು.
ಕಂಪೆನಿಯ ಕೊಡುಗೆಯನ್ನು ಸ್ವೀಕರಿಸಿದ ಹೆಗ್ಗಡೆಯವರು ಕಂಪೆನಿಯು ಈ ಹಿಂದೆ ತಯಾರಿಸಿದ ಹೊಸ ಮಾದರಿಯ ವಾಹನಗಳನ್ನು ಪ್ರಥಮವಾಗಿ ಧರ್ಮಸ್ಥಳಕ್ಕೆ ಅರ್ಪಿಸಿದ್ದು, ಇದು ಅವರ ಮೂರನೇ ಕೊಡುಗೆಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಇವರ ವಾಹನಗಳನ್ನು ಬಳಸಿಕೊಳ್ಳುತ್ತೇವೆ.ದೇಶದ ಪ್ರತಿಷ್ಠಿತ ಮಹೇಂದ್ರ ಕಂಪೆನಿಯ ವಾಹನಗಳು ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮ ಸೇವೆ ನೀಡುತ್ತಿವೆ ಎಂದರು.