ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ-ದೂರುದಾರರು ತೋರಿಸಿರುವ ಸಮಾಧಿ ಸ್ಥಳಗಳಲ್ಲಿ ಅಗೆಯುವಿಕೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪಾಯಿಂಟ್ 11ರ ಪಕ್ಕದಲ್ಲಿ ಬಳಿ ಮಾನವ ಅಸ್ಥಿಪಂಜರ ಅವಶೇಷಗಳು ಕಂಡುಬಂದಿವೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸ್ಥಳ ಸಂಖ್ಯೆ 11 ರಲ್ಲಿ ಅಗೆಯುವಿಕೆಯನ್ನು ಪುನರಾರಂಭಿಸಲು ಎಸ್‌ಐಟಿ ಅಧಿಕಾರಿಗಳು ಮತ್ತು ದೂರುದಾರರು ಧರ್ಮಸ್ಥಳ ಗ್ರಾಮದ ಹೆದ್ದಾರಿ ಬದಿಯ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದರು. ಆದರೆ ಗುರುತಿಸಿದ ಸಮಾಧಿ ಸ್ಥಳ ಬಿಟ್ಟು ತಂಡ ಕಾಡಿನೊಳಕ್ಕೆ ಪ್ರವೇಶಿಸಿದ್ದು ಅಲ್ಲಿ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಇನ್ನು ಪಾಯಿಂಟ್ 11ರ ಬಳಿ ಸಮಾಧಿ ಅಗೆದ ಜಾಗದಲ್ಲಿ ಅಸ್ಥಿಪಂಜರ ಸಿಕ್ಕಿದೆಯಾ? ಇಲ್ಲವ? ಎಂಬುದು ಇನ್ನೂ ತಿಳಿದುಬಂದಿಲ್ಲ.
ಸ್ಥಳದಲ್ಲಿ ಪುರುಷನದ್ದೆಂದು ಶಂಕಿಸಲಾದ ಮಾನವ ಅಸ್ಥಿಪಂಜರ ಅವಶೇಷಗಳು ಹಗ್ಗ ಮತ್ತು ಕೆಲವು ಬಟ್ಟೆಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಅವಶೇಷಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗುವುದು ಮತ್ತು ಪೊಲೀಸರು ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ.