ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ
ಪಡುಬಿದ್ರಿ: ಅಮಾಯಕ ಜೀವ ಬಲಿ ಪಡೆಯುತ್ತಿರುವ, ಪಡುಬಿದ್ರಿ ಮುಖ್ಯ ಪೇಟೆ ಪ್ರದೇಶದಲ್ಲಿ ತುರ್ತಾಗಿ ಪ್ಲೈ ಒವರ್ ನಿರ್ಮಾಣ ಸಹಿತ ಸರ್ವಿಸ್ ರಸ್ತೆ, ಹೊಂಡಮಯ ಹೆದ್ದಾರಿ ದುರಸ್ತಿ, ಹೆಜಮಾಡಿ ಟೋಲ್ ಅವ್ಯವಸ್ಥೆ ಇದನ್ನೆಲ್ಲಾ ತಕ್ಷಣವೇ ಕಾರ್ಯಗತಗೊಳಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಗೌರವ ಅಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಸಿದ್ದಾರೆ.
ಅವರು ಕಾಪು ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಆರಂಭಗೊಂಡು ಅದೆಷ್ಟೋ ಸಮಯ ಸಂದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಈ ಅಪೂರ್ಣ ಕಾಮಗಾರಿಯಿಂದಾಗಿ ಅದೇಷ್ಟೋ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೂ ಅವೈಜ್ಞಾನಿಕವಾಗಿ ಹೆಜಮಾಡಿಯಲ್ಲಿ ಸುಂಕ ವಸೂಲಿ ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿದೆ. ಈ ನಿಟ್ಟಿ ಉಡುಪಿ ಜಿಲ್ಲಾಧಿಕಾರಿಯವರು ಹೆದ್ದಾರಿ ಗುತ್ತಿಗೆ ಕಂಪನಿಗೆ ಕಾಮಗಾರಿ ಮುಗಿಸಲು ಗಡುವು ನೀಡಬೇಕು, ಹೆಜಮಾಡಿಯಿಂದ ಕುಂದಾಪುರದ ವರಗೆ ಬಾಕಿ ಉಳಿದ ಸರ್ವಿಸ್ ರಸ್ತೆ ಯಾರ ಒತ್ತಡಕ್ಕೂ ಮಣಿಯದೆ ಪೂರ್ಣಗೊಳಿಸ ಬೇಕು, ಇಕ್ಕಟ್ಟಾದ ಪ್ರದೇಶ ಸಹಿತ ಅಪಘಾತ ವಲಯವಾಗಿ ರೂಪುಗೊಂಡಿರುವ ಪಡುಬಿದ್ರಿ ಮುಖ್ಯ ಪೇಟೆಯಲ್ಲಿ ಪ್ಲೈ ಒವರ್ ನಿರ್ಮಾಣ, ಹೆದ್ದಾರಿಯುದ್ದಕ್ಕೂ ಅಳವಡಿಸಲಾದ ದಾರಿ ದೀಪಗಳ ದುರಸ್ಥಿ ಹಾಗೂ ನಿರ್ವಹಣೆ, ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಾಹನಗಳಿಗೆ ಉಚಿತ ಸಂಚಾರಕ್ಕೆ ಅವಕಾಶ, ಮೂಲಭೂತ ಸೌಕರ್ಯ ವಂಚಿತ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ತಕ್ಷಣವೇ ಪೂರಕ ವ್ಯವಸ್ಥೆ ಅಳವಡಿಕೆ ಈ ಎಲ್ಲಾ ವ್ಯವಸ್ಥೆಗಳನ್ನು ಶೀಘ್ರವಾಗಿ ಕಾರ್ಯ ರೂಪಕ್ಕೆ ತಾರದೇ ಇದ್ದಲ್ಲಿ ನಮ್ಮ ಸಂಘಟನೆ ಸಾರ್ವಜನಿಕರ ನೆರವುನೊಂದಿಗೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಹೆಜಮಾಡಿ ಟೋಲ್ ಪ್ರಬಂಧಕ ತಿಮ್ಮಯ್ಯನವರ ವರ್ತನೆ ಮಿತಿ ಮೀರುತ್ತಿದ್ದು, ಇವರ ವಿರುದ್ಧ ಶೀಘ್ರದಲ್ಲೇ ವಿಭಿನ್ನವಾಗಿ ಪ್ರತಿಭಟಿಸಲಾಗುವುದು.
ನಿಜಾಮುದ್ದೀನ್, ಉಪಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ.
ಸುದ್ಧಿ ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಪ್ರಶಾಂತ್ ಪಡುಬಿದ್ರಿ, ಶಫಿ ಕಲಂದರ್, ಜ್ಯೋತಿ ಶೇರಿಗಾರ್, ಕಿರಣ್ ಪ್ರತಾಪ್ ಇದ್ದರು.