Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಂಗಳೂರು: ಆಸ್ಪತ್ರೆ ಕಟ್ಟುವಾಗ ಎಡವಟ್ಟು – ಎದುರಾಯ್ತು ಗುಳಿಗ ದೈವದ ಕಂಟಕ.!!

ಮಂಗಳೂರು: ಹಂಪನಕಟ್ಟೆ ಯಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ನೂತನ ಸರ್ಜಿಕಲ್‌ ಸೂಪರ್‌ ಸ್ಪೆಷಾಲಿಟಿ ಕಟ್ಟಡ ಇತ್ತೀಚೆಗೆ ಉದ್ಘಾಟನೆಗೊಂಡಿದ್ದು, ಈ ಸ್ಥಳದಲ್ಲಿ ಗುಳಿಗ ದೈವದ ಸಾನ್ನಿಧ್ಯವಿತ್ತು ಎಂಬ ಹಿನ್ನೆಲೆಯಲ್ಲಿ ಉದ್ಘಾಟನೆಗೂ ಮೊದಲು ದೈವದ ಪುನರ್‌ ಪ್ರತಿಷ್ಠೆ ನಡೆಸಲಾಗಿದೆ!

ದೈವಾರಾಧನೆ ತುಳುನಾಡಿನಲ್ಲಿರುವುದರಿಂದ ಆ ನಂಬಿಕೆಗೆ ಅನುಸಾರವಾಗಿ, ಆಸ್ಪತ್ರೆಯಲ್ಲಿರುವ ಸಿಬಂದಿ ಹಾಗೂ ರೋಗಿಗಳಿಗೆ ಯಾವುದೇ ಸಮಸ್ಯೆ ಆಗಬಾರದು, ನೆಗೆಟಿವ್‌ ಎನರ್ಜಿಯ ವಾತಾವರಣ ಇರಬಾರದು ಎಂಬ ಕಾರಣದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರ ಗಮನಕ್ಕೂ ತರಲಾಗಿತ್ತು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೂತನ ಕಟ್ಟಡದ ಕಾಮಗಾರಿ ಆರಂಭವಾದ ಬಳಿಕ ಕೆಲವು ಕಾರ್ಮಿಕರಿಗೆ ಹಾಗೂ ಆಸ್ಪತ್ರೆ ಸಿಬಂದಿಗೆ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಅವರು ಅಧಿಕಾರಿಗಳಲ್ಲಿ ನೋವು ತೋಡಿಕೊಂಡು, ಪ್ರಶ್ನಾಚಿಂತನೆಯ ಸಲಹೆಯನ್ನೂ ನೀಡಿದ್ದರು. ಆ ಹಿನ್ನೆಲೆಯಲ್ಲಿ ನಡೆಸಿದ ಪ್ರಶ್ನೆ ಚಿಂತನೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಈ ಹಿಂದೆ ಗುಳಿಗ ದೈವದ ಸಾನ್ನಿಧ್ಯವಿತ್ತು ಎಂಬುದು ಗೊತ್ತಾಗಿದೆ ಎನ್ನಲಾಗಿದೆ.

ಅನಾದಿ ಕಾಲದಲ್ಲಿ ಈ ಪರಿಸರದಲ್ಲಿ ಕುಟುಂಬವೊಂದು ಗುಳಿಗ ಸಹಿತ 5 ದೈವಗಳನ್ನು ಆರಾಧಿಸಿಕೊಂಡು ಬಂದಿದ್ದು, ಕಾಲಾನಂತರ ಆ ಕುಟುಂಬ ವಾಮಂಜೂರು ಕಡೆಗೆ ತೆರಳಿತ್ತು. ಇತರ ದೈವಗಳನ್ನು ಆ ಕುಟುಂಬ ತನ್ನೊಂದಿಗೆ ಕರೆದೊಯ್ದಿತ್ತು. ಆದರೆ ಗುಳಿಗ ದೈವ ಶರವು ಕ್ಷೇತ್ರಕ್ಕೆ ಸಂಬಂಧಿಸಿದ್ದರಿಂದ ಅದು ತಾನಿದ್ದ ಪರಿಸರದ ಮರವೊಂದರ ಬುಡದಲ್ಲಿ ನೆಲೆಯಾಗಿತ್ತು. (ಸ್ಥಳಕ್ಕೆ ಸಂಬಂಧಿಸಿದ ಗುಳಿಗ ಬೇರೆ ಕಡೆಗೆ ಹೋಗುವುದಿಲ್ಲ ಎಂಬ ನಂಬಿಕೆ ಇದೆ). ಹೊಸ ಕಟ್ಟಡದ ಸ್ಥಳದಲ್ಲಿದ್ದ ಆ ಮರವನ್ನು ನೆಲಸಮ ಮಾಡಲಾಯಿತು. ಆಗ ದೈವ ರೈಲು ನಿಲ್ದಾಣ ಬಳಿಯಲ್ಲಿರುವ ಮುತ್ತಪ್ಪನ್‌ ಗುಡಿ ಪರಿಸರದಲ್ಲಿ ನೆಲೆಯಾಯಿತು.

ತನ್ನ ಸಾನ್ನಿಧ್ಯವನ್ನು ತೆರವು ಮಾಡಿರುವುದರಿಂದ ಅದಕ್ಕೆ ನೆಲೆ ಇಲ್ಲದೆ ಸಮಸ್ಯೆ ಉಂಟಾಗಿದೆ ಎಂಬುದು ಪ್ರಶ್ನೆಯಲ್ಲಿ ಕಂಡುಬಂದಿತ್ತು. ಅಲ್ಲದೆ ಕಾಮಗಾರಿ ವೇಳೆ ನಾಗನ ಹತ್ಯೆಯೂ ನಡೆದಿರುವುದು ಗೊತ್ತಾಗಿತ್ತು. ಹಾಗಾಗಿ ಆಶ್ಲೇಷಾ ಬಲಿಯನ್ನೂ ನಡೆಸಲಾಗಿದೆ. ಬಳಿಕ ಆಸ್ಪತ್ರೆ ಕಟ್ಟಡ ಸಮೀಪದ ಅಶ್ವತ್ಥ ಮರದ ಬುಡದಲ್ಲಿ ಗುಳಿಗನನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

Leave a Comment