ಬೆಂಗಳೂರಿಗೆ ಉದ್ಯೋಗದಲ್ಲಿದ್ದು, ವಾಸವಾಗಿದ್ದ ಕೇರಳದ ಹುಡುಗ ಹಾಗೂ ಅಸ್ಸಾಂ ಹುಡುಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಪ್ರೀತಿಗೆ ಬಿದ್ದಿದ್ದಾರೆ. ಆದರೆ, ಇಬ್ಬರೂ ಒಟ್ಟಿಗೆ ಇರುವ ಅಪಾರ್ಟ್ಮೆಂಟ್‌ನಲ್ಲಿ ಪ್ರೇಮಿಯೇ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ಪರಾರಿ ಆಗಿರುವ ಘಟನೆ ಬೆಂಗಳೂರಿನ ಇಂದಿರಾನಗರ ರಾಯಲ್ ಲಿವಿಂಗ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ಕೊಲೆಯಾದ ಯುವತಿ ಅಸ್ಸಾಂ ರಾಜ್ಯದ ಮಾಯಾ. ಆರೋಪಿಯನ್ನು ಕೇರಳದ ಆರವ್ ಅನಾಯ್ ಎಂದು ಗುರುತಿಸಲಾಗಿದೆ.
ಇಬ್ಬರೂ ಬೆಂಗಳೂರಿನ ಖಾಸಗಿ ಕಂಪನಿಯೊoದರಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಇಬ್ಬರ ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿಯಾಗಿತ್ತು. ನಂತರ, ಇನ್ನು ಇಬ್ಬರೂ ಮನೆಯನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದರಿಂದ ನಗರದ ವಿವಿಧೆಡೆ ಸುತ್ತಾಡುತ್ತಿದ್ದರು. ನಾಲ್ಕೈದು ದಿನಗಳ ಹಿಂದೆ ಇಂದಿರಾನಗರದ ದಿ ರಾಯಲ್ ಲಿವಿಂಗ್ ಎಂಬ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಇದ್ದರು.
ಕಳೆದ ಮೂರು ದಿನಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಆಗ ಇಬ್ಬರ ನಡುವೆ ಜಗಳದ ವೇಳೆ ಪ್ರೇಮಿ ಆರವ್ ತನ್ನ ಪ್ರೇಯಸಿ ಮಾಯಾಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾರೆ. ಈ ಕೊಲೆ ನಡೆದು ಮೂರು ದಿನಗಳ ನಂತರ ಮನೆಯಿಂದ ದುರ್ವಾಸನೆ ಬಂದ ನಂತರ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದಿರಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.