ಮಂಗಳೂರು: ಮಂಗಳೂರು ಮನಪಾ ವ್ಯಾಪ್ತಿಯ ಕೊಡಿಯಾಲ್‌ಬೈಲ್ ಟಿ.ವಿ.ರಮಣ್ ಪೈ ಕನ್ವೆಂಷನ್ ಸೆಂಟರ್ ಮುಂಭಾಗದ ರಸ್ತೆಯ ಮನೆಯೊಂದರಲ್ಲಿ ತೆರಿಗೆ ಪಾವತಿಸದ ಅಕ್ರಮವಾಗಿ ದಾಸ್ತಾನಿರಿಸಿದ್ದ ವಿದೇಶಿ ಮದ್ಯದೊಂದಿಗೆ ಓರ್ವ ಆರೋಪಿಯನ್ನು ಅಬಕಾರಿ ಇಲಾಖೆ ಶನಿವಾರ ವಶಪಡಿಸಿದೆ.
ಕರ್ನಾಟಕ ಅಬಕಾರಿ ಕಾಯ್ದೆಯ ವಿರುದ್ಧವಾಗಿ ಯಾವುದೇ ದಾಖಲಾತಿಗಳಿಲ್ಲದೆ, ಮಾರಾಟ ಮಾಡುವ ಉದ್ದೇಶದಿಂದ ತೆರಿಗೆ ಪಾವತಿಸದ ವಿದೇಶಿ 6 ಲೀ. ಮದ್ಯದ ಬಾಟಲಿಗಳನ್ನು ದಾಸ್ತಾನು ಇರಿಸಲಾಗಿತ್ತು.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶದಂತೆ, ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ, ಹಾಗೂ ಅಬಕಾರಿ ಉಪ ಅಧಿಕ್ಷಕರು ಮಂಗಳೂರು ಉಪ ವಿಭಾಗ-1 ರವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು, ಮಂಗಳೂರು ಉಪ ವಿಭಾಗ-1 ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ದಿನಕರ ಪಾಂಡೇಶ್ವರ್ ಎಂಬ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ 83,140 ರೂ.ಗಳು ಆಗಿರುತ್ತದೆ.