
ಕೇರಳದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಶರೋನ್ ರಾಜ್ ಕೊಲೆ ಪ್ರಕರಣ. ತನ್ನ ಪ್ರಿಯಕರನಿಗೆ ಜ್ಯೂಸ್ ನಲ್ಲಿ ವಿಷ ಬೆರೆಸಿ ಆತನನ್ನು ಅತೀ ಕ್ರೂರವಾಗಿ ಕೊಲೆ ಮಾಡಿದ ಕೊಲೆಗಾತಿ ಗ್ರೀಷ್ಮಾಳಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ.
ಕೇರಳದ ತಿರುವನಂತಪುರದಲ್ಲಿ ಅ.25ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಮೃತಪಟ್ಟಿದ್ದ. ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅನುಮಾನ ಮೂಡಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ವಿಚಾರಣೆ ಬಳಿಕ ಅ.31 ರಂದು ಗ್ರೀಷ್ಮಾ, ವಿಷವುಣಿಸಿ ಕೊಲೆ ಮಾಡಿದ್ದಾಗಿ ತಪ್ರೊಪ್ಪಿಕೊಂಡಳು.
ಅ. 14ರಂದು ಶರೋನ್ ರಾಜ್‌ನನ್ನು ತನ್ನ ಮನೆಗೆ ಕರೆಸಿಕೊಂಡ ಗ್ರೀಷ್ಮಾ, ಆಯುರ್ವೇದದ ಔಷಧಿಯಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಕುಡಿಸಿದ್ದಳು. ಬಳಿಕ ವಿಪರೀತ ವಾಂತಿ ಮಾಡಿಕೊಂಡಿದ್ದ ರಾಜ್, ತನ್ನ ಸ್ನೇಹಿತನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು-ಬದುಕಿನ ನಡುವೆ ಹೋರಾಡಿ ಅ.25 ರಂದು ಸಾವನ್ನಪ್ಪಿದ್ದನು.
ನ್ಯಾಯಮೂರ್ತಿ ಎ ಎಂ ಬಶೀರ್ ಅವರು ವಾದ ವಿವಾದ ಆಲಿಸಿದ ನಂತರ ತೀರ್ಪು ನೀಡಿ, ಇದು ಅಪರೂಪದ ಪ್ರಕರಣ, ಸರಿಯಾಗಿ ಪೂರ್ವನಿಯೋಜಿತವಾಗಿ ನಡೆಸಿದ ಅಪರಾಧ ಕೃತ್ಯವಾಗಿದೆ ಎಂದು ತೀರ್ಮಾನಿಸಿದರು. ಆರೋಪಿಯು ಆಕೆಯ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯ ಕಾರಣದಿಂದಾಗಿ ಯಾವುದೇ ವಿನಾಯ್ತಿಗೆ ಅರ್ಹಳಲ್ಲ ಎಂದು ತೀರ್ಪು ನೀಡಿದರು.
ಮಹಿಳೆಯ ಕೃತ್ಯವು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದು ಆರೋಪಿ ಪ್ರೀತಿಯ ಪಾವಿತ್ರ‍್ಯತೆಯನ್ನು ಉಲ್ಲಂಘಿಸಿದ್ದಾಳೆ ಎಂದು ಕಂಡುಬರುತ್ತಿದೆ ಎಂದರು. ತೀರ್ಪು ಕೇಳಲು ಶರೋನ್ ಪೋಷಕರನ್ನು ನ್ಯಾಯಾಲಯವು ಕರೆಸಿಕೊಂಡಿತ್ತು. ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಹೆತ್ತವರು ಕಣ್ಣೀರು ಸುರಿಸಿದರು. 24 ವರ್ಷದ ಗ್ರೀಷ್ಮಾ ಗಲ್ಲು ಶಿಕ್ಷೆಗೆ ಗುರಿಯಾದ ಕೇರಳದ ಅತ್ಯಂತ ಕಿರಿಯ ಮಹಿಳೆಯಾಗಿದ್ದು ಗಲ್ಲು ಶಿಕ್ಷೆಗೆ ಗುರಿಯಾದ ರಾಜ್ಯದ ಎರಡನೇ ಮಹಿಳೆ ಎಂಬ ಕುಖ್ಯಾತಿಗೆ ಗುರಿಯಾಗಿದ್ದಾಳೆ.