ಭಟ್ಕಳ: ಜಾಲಿ ಬೀಚ್ ಬಳಿ ರೆಸಾರ್ಟ್ ವೊಂದರಲ್ಲಿ 5 ವರ್ಷದ ಬಾಲಕ ಈಜುಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಬಾಲಕನು ಸ್ಥಳೀಯ ಮದ್ರಸಾ ಶಿಕ್ಷಕರಾದ ಮೌಲವಿ ಶಾಹಿದುಲ್ಲಾ ಅವರ ಪುತ್ರ ಮುಹಮ್ಮದ್ ಮುಸ್ತಕೀಂ ಶೇಖ್ ಎಂದು ತಿಳಿದು ಬಂದಿದೆ.
ತಾಯಿ ಮತ್ತು ತಮ್ಮನೊಂದಿಗೆ ರೆಸಾರ್ಟ್‌ನಲ್ಲಿ ಇದ್ದ ಬಾಲಕ, ಕೆಲ ಹೊತ್ತು ತಾಯಿಯು ಸ್ಥಳದಲ್ಲಿಲ್ಲದ ಸಂದರ್ಭದಲ್ಲೇ ಸುಮಾರು ಐದು ಅಡಿ ಆಳದ ಈಜುಕೊಳಕ್ಕೆ ಜಾರಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ.
ಕೂಡಲೇ ತಾಯಿಯು ನೀರಿನಿಂದ ಬಾಲಕನನ್ನು ಹೊರತೆಗೆದರು. ರೆಸಾರ್ಟ್ ಹೊರಭಾಗದಲ್ಲಿದ್ದ ಕೆಲ ಯುವಕರು ಸಹ ಸಹಾಯಕ್ಕೆ ಧಾವಿಸಿ ಸಿಪಿಆರ್ ನೀಡಿ ಜೀವ ಉಳಿಸಲು ಪ್ರಯತ್ನಿಸಿದರು. ಬಳಿಕ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಬಾಲಕ ಮೃತಪಟ್ಟಿರುವುದನ್ನು ಧೃಡಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ರಾತ್ರಿ ವೇಳೆಗೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

