ಬೆಂಗಳೂರು : ಮಲ್ಪೆ ಕಡಲತೀರದ ಸುಮಾರು ಎಂಟು ಎಕರೆ ಸರ್ಕಾರಿ ಬಂದರು ವ್ಯಾಪ್ತಿಯ ಭೂಮಿಯನ್ನು ಪಾರದರ್ಶಕತೆ ಇಲ್ಲದೆ, ಸಾರ್ವಜನಿಕರ ಅನುಮತಿ ಪಡೆಯದೆ, ಹೊರಗುತ್ತಿಗೆ ನೀಡಲಾಗಿದೆ. ಸರ್ಕಾರಿ ಭೂಮಿಯ ಅಕ್ರಮ ಗುತ್ತಿಗೆ ತಕ್ಷಣ ರದ್ದುಪಡಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಅರುಣ್ ಕುಂದರ್ ಕಲ್ಗದ್ದೆ ಹೇಳಿದ್ದಾರೆ.
ಮಲ್ಪೆ ಬಂದರು ಸರ್ಕಾರಿ ಭೂಮಿಯ ಅಕ್ರಮ ಗುತ್ತಿಗೆ ಈ ಘಟನೆ ಉಡುಪಿ ಜಿಲ್ಲೆಯ ಜನತೆಗೆ ಆಘಾತ ಮತ್ತು ಅಸಮಾಧಾನ ಉಂಟುಮಾಡಿದೆ. ಸರ್ಕಾರಿ ಆಸ್ತಿ ಜನರ ಆಸ್ತಿ. ಸಾರ್ವಜನಿಕರಿಗೆ ಸೇರಿದ ಬಂದರು ಪ್ರದೇಶವನ್ನು ಖಾಸಗಿ ಸಂಸ್ಥೆ/ಸಂಘಗಳ ಲಾಭಕ್ಕಾಗಿ ವರ್ಗಾವಣೆ ಮಾಡುತ್ತಿರುವುದು ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಜನಹಿತವಿರೋಧಿ ಕ್ರಮವಾಗಿದೆ. ಸ್ಥಳ ಪರಿಶೀಲನೆ, ಪರಿಸರ ಪ್ರಭಾವ, ಮೀನುಗಾರ ಸಮುದಾಯದ ಅಭಿಪ್ರಾಯ ಪಡೆದುಕೊಳ್ಳದೆ ಈ ಗುತ್ತಿಗೆ ನೀಡಲಾಗಿದೆ. ಮಲ್ಪೆ ಕಡಲತೀರದಲ್ಲಿ ನಿರ್ಮಿಸಿದ್ದ ಮಕ್ಕಳ ಆಟದ ಮೈದಾನ, ಭಜನಾ ಕ್ಷೇತ್ರ, ಪ್ರವಾಸೋದ್ಯಮ ಮೂಲಸೌಕರ್ಯಗಳ ಬಳಕೆಗೆ ಸಾರ್ವಜನಿಕರಿಗೆ ಇರುವ ಹಕ್ಕು ಉಲ್ಲಂಘನೆಯಾಗಿದೆ. ಮಲ್ಪೆ ಬಂದರು ಉಡುಪಿ ಜಿಲ್ಲೆಯ ಮೀನುಗಾರಿಕೆ ಆರ್ಥಿಕತೆಗೆ ಕೇಂದ್ರ, ಬಂದರು ಚಟುವಟಿಕೆಗಳಿಗೆ ಮೂಲಸೌಕರ್ಯ, ಪ್ರವಾಸೋದ್ಯಮದ ಪ್ರಮುಖ ಕೇಂದ್ರ, ಭಜನಾ-ಸಾಂಸ್ಕೃತಿಕ ಚಟುವಟಿಕೆಗಳ ವಿಕಾಸ ಕ್ಷೇತ್ರ ಹೀಗಾಗಿ ಈ ಪ್ರದೇಶದ ಭೂಮಿಯನ್ನು ವ್ಯವಹಾರಿಕ ಹಕ್ಕಿಗೆ ಒಳಪಡಿಸುವುದು ಭವಿಷ್ಯದ ಬಂದರು ಮತ್ತು ಮೀನುಗಾರ ಸಮುದಾಯಕ್ಕೆ ಅಪಾಯಕಾರಿ ಎಂದಿದ್ದಾರೆ. ಗುತ್ತಿಗೆ ಒಪ್ಪಿಗೆ ಪತ್ರ ತಕ್ಷಣ ರದ್ದುಪಡಿಸಬೇಕು, ವಿಚಾರಣೆಗೆ ನ್ಯಾಯಿಕ/ನಿಜಾನ್ವೇಷಣಾ ಸಮಿತಿ ರಚಿಸಬೇಕು, ಭೂಮಿ ಬಳಕೆ ಕುರಿತು ಸಾರ್ವಜನಿಕ ಗ್ರಾಮಸಭೆ / ಸಾರ್ವಜನಿಕ ವಿಚಾರಣೆ ನಡೆಸಬೇಕು, ಭೂಮಿಯ ಸಮಗ್ರ ಬಳಕೆ ಕುರಿತು ಮೀನುಗಾರರು, ಸ್ಥಳೀಯರು, ಪ್ರವಾಸೋದ್ಯಮ ಸಂಘಟನೆಗಳು, ಪರಿಸರ ತಜ್ಞರು ಹಾಗೂ ಆಡಳಿತ ಸಮಿತಿಗಳ ಸಲಹೆ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಜನರಿಂದ ಜನರಿಗಾಗಿ ಭೂಮಿಯನ್ನು ಉಳಿಸೋಣ, ಮಲ್ಪೆ ಬಂದರು ಜನರ ಬದುಕು, ಸಂಸ್ಕೃತಿ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಸ್ಥಳ. ಅದು ಯಾವುದೂ ರಾಜಕೀಯ / ವ್ಯಾಪಾರಿಕ ಒತ್ತಡಕ್ಕೆ ಒಳಡಾಗಬಾರದು. ನಾವು ಈ ಹೋರಾಟವನ್ನು ಕಾನೂನು ಪರ, ಶಾಂತಿಪೂರ್ಣ ಮತ್ತು ಜನತಾಂತ್ರಿಕ ವಿಧಾನದಲ್ಲಿ ಮುಂದುವರಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

