ಉಪ್ಪಿನಂಗಡಿ: 10ನೇ ತರಗತಿವಿದ್ಯಾರ್ಥಿನಿಯೋರ್ವಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದಲ್ಲಿ ನಡೆದಿದೆ.ಮೃತ ವಿದ್ಯಾರ್ಥಿನಿಯನ್ನು ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಹರ್ಷಿತಾ (15) ಎಂದು ಗುರುತಿಸಲಾಗಿದೆ.ಹರ್ಷಿತಾ ಉಪ್ಪಿನಂಗಡಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನವೆಂಬರ್ 4ರಂದು ತಲೆನೋವು ಇದೆ ಎಂದು ಹೇಳಿ ಶಾಲೆಗೆ ತೆರಳದೇ ಮನೆಯಲ್ಲಿಯೇ ಇದ್ದಾಳೆ.

ಈ ಸಂದರ್ಭಮನೆಯಲ್ಲಿ ಇದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾಳೆ.ವಿಷಯ ತಿಳಿದ ತಕ್ಷಣ ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಗೀತಾ ಮನೆಗೆ ಬಂದು, ಆಟೋರಿಕ್ಷಾದ ಮೂಲಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಆರೈಕೆಗೆ 108 ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹರ್ಷಿತಾ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 12ರಂದು ಬೆಳಗ್ಗೆ 1.00 ಗಂಟೆ ಸುಮಾರಿಗೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.ಮೃತಳ ತಂದೆ ನೀಡಿರುವ ದೂರಿನಂತೆ, ಕಡಬದ ರಾಜೇಶ್ ಎಂಬಾತ ಫೋನ್ ಮೂಲಕ ಕಿರುಕುಳ ನೀಡುತ್ತಿದ್ದ ಶಂಕೆ ಇದ್ದು, ಇದೇ ಕಾರಣದಿಂದ ಮಗಳು ಆತ್ಮಹತ್ಯೆಗೆ ಮುಂದಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹೊರತಾಗಿ ಸಾವಿಗೆ ಬೇರೆ ಕಾರಣದ ಬಗ್ಗೆ ಮಾಹಿತಿ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಹರ್ಷಿತಾಳ ಮೃತದೇಹ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
previous post

