Mangalore and Udupi news
Blog

ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಮಾಡಿದ್ದ ಆರೋಪಿ ಸೆರೆ…!!

ಬೆಂಗಳೂರು: ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಪ್ರಕರಣ ಸಂಬಂಧ ಆರೋಪಿ ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬಾತನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಪೊಲೀಸರೇ ಈ ಸೈಬರ್ ಖದೀಮರ ಜಾಲ ನೋಡಿ ಶಾಕ್ ಆಗಿದ್ದಾರೆ. 20ರಿಂದ 25 ವಯಸ್ಸಿನ ಯುವಕರು ಈ ದಂಧೆಯಲ್ಲಿ ನಿರತರಾಗಿದ್ದು, ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ತೊಡಗಿಗೊಂಡಿರುವ ಆಘಾತಕಾರಿ ವಿಷಯ ಈ ವೇಳೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ವಿಕಾಸ್ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸೆ.15ರಂದು ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಆಗಿತ್ತು. ಆನ್ಲೈನ್ನಲ್ಲಿ ಕೆಲ ವಸ್ತುಗಳನ್ನು ಪ್ರಿಯಾಂಕಾ ಉಪೇಂದ್ರ ಬುಕ್ ಮಾಡಿದ್ದರು. ಈ ವೇಳೆ ಮೊಬೈಲ್ಗೆ ಲಿಂಕ್ ಬಂದಿದ್ದು, ಆ ಲಿಂಕ್ ಅನ್ನು ಪ್ರಿಯಾಂಕ ಕ್ಲಿಕ್ ಮಾಡಿದ್ದರು. ಬಳಿಕ ನಟಿ ಪ್ರಿಯಾಂಕಾ ವಾಟ್ಸಾಪ್ ಹ್ಯಾಕ್ ಮಾಡಿದ್ದ ಖದೀಮ, ಅವರ ಸಂಪರ್ಕದಲ್ಲಿದ್ದವರಿಗೆ 55 ಸಾವಿರ ಹಣ ಕಳುಹಿಸುವಂತೆ ಮೆಸೇಜ್ ಮಾಡಿದ್ದ. ಈ ವೇಳೆ ಆರೋಪಿ ಯಾರೆಂದು ತಿಳಿಯಲು ಯತ್ನಿಸಿರುವ ಪ್ರಿಯಾಂಕಾ, ಪತಿ ಉಪೇಂದ್ರ ಹಾಗೂ ಮ್ಯಾನೇಜರ್ ನಂಬರ್ನಿಂದ ಕರೆ ಮಾಡಿದ್ದರು. ಬಳಿಕ ಮ್ಯಾನೇಜರ್ ಹಾಗೂ ಉಪೇಂದ್ರ ಮೊಬೈಲ್ ಕೂಡ ಹ್ಯಾಕ್ ಆಗಿತ್ತು.

ಹಣ ಅಗತ್ಯವಿದೆ ಎಂದು ಪ್ರಿಯಾಂಕ ಅವರ ವಾಟ್ಸ್ಯಾಪ್ನಿಂದ ಆರೋಪಿ ಹಲವರಿಗೆ ಮೆಸೇಜ್ ಮಾಡಿದ್ದು, ಈ ವೇಳೆ ಪ್ರಿಯಾಂಕಾ ಅವರೇ ಸಂದೇಶ ಕಳುಹಿಸಿದ್ದು ಎಂದು ಕೆಲವರು ಹಣ ಹಾಕಿದ್ದಾರೆ. ಸ್ವತಃ ಉಪೇಂದ್ರ ಪುತ್ರ ಕೂಡ ತಾಯಿ ಅಕೌಂಟ್ಗೆ ಐವತ್ತು ಸಾವಿರ ಹಣ ಹಾಕಿದ್ದರು. ಇನ್ನು ಕೆಲವರು ಅನುಮಾನಗೊಂಡು ಪ್ರಿಯಾಂಕಾ ಅವರ ನಂಬರ್ಗೆ ಕರೆ ಮಾಡಿದರೆ ಕಾಲ್ ಕಟ್ ಆಗುತ್ತಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಸದಾಶಿವನಗರ ಠಾಣೆಗೆ ಈ ಬಗ್ಗೆ ಪ್ರಿಯಾಂಕಾ ದೂರು ನೀಡಿದ್ದರು.

ಆದರೆ, ಅದಾಗಲೇ ಸೈಬರ್ ವಂಚಕನ ಅಕೌಂಟ್ಗೆ ಒಂದೂವರೆ ಲಕ್ಷ ರೂಪಾಯಿ ಹಣ ವರ್ಗಾವಣೆ ಆಗಿತ್ತು. ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ತನಿಖೆ ವೇಳೆ ಆರೋಪಿ ಬಿಹಾರದ ದಶರತಪುರದ ನಿವಾಸಿ ಎನ್ನುವುದು ಗೊತ್ತಾಗಿತ್ತು.

Related posts

Leave a Comment