ದೆಹಲಿ : ನವದೆಹಲಿಯ ಕೆಂಪುಕೋಟೆ ಬಳಿ ಸಂಜೆ 6.52ರ ಸುಮಾರಿಗೆ ಮಾರುತಿ ಇಕೋ ಕಾರು ಸ್ಫೋಟಗೊಂಡು, ಅದರ ಹಿಂದೆಯಿದ್ದ ವಾಹನಗಳು ಹಾಗೂ ಪಕ್ಕದ ಅಂಗಡಿಗಳಿಗೂ ಬೆಂಕಿ ಹರಡಿತು. ಈ ಭೀಕರ ಸ್ಫೋಟದಲ್ಲಿ ದೇಹದ ಭಾಗಗಳು 150-160 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡಿದ್ದು, ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ದೆಹಲಿ ಸಮೀಪ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಿದ ಕೆಲವೇ ಗಂಟೆಗಳಲ್ಲಿ ಈ ಸ್ಫೋಟ ಸಂಭವಿಸಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಮಹಾ ನಿರ್ದೇಶಕರು ಡಾ. ಎಂಎ ಸಲೀಂ ಅವರು ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಕೆಆರ್ ಮಾರುಕಟ್ಟೆ, ಮೆಜೆಸ್ಟಿಕ್, ಸಿನಿಮಾ ಮಂದಿರಗಳು, ಮಾಲ್ ಗಳು, ದೇವಾಲಯಗಳು ಸೇರಿದಂತೆ ಎಲ್ಲಾ ಜನನಿಬಿಡ ಜಾಗಗಳಲ್ಲಿ ತೀವ್ರ ತಪಾಸಣೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇಂದಿನಿಂದಲೇ ರಾತ್ರಿ ಗಸ್ತುಗಳನ್ನು ಮತ್ತು ತಪಾಸಣೆ ಹೆಚ್ಚು ಮಾಡುವಂತೆ. ಜೊತೆಗೆ, ಬೆಂಗಳೂರಿನ ಎಲ್ಲಾ ಲಾಡ್ಜ್ ಗಳಿಗೆ ಭೇಟಿ ನೀಡಿ, ಅಲ್ಲಿ ಉಳಿದುಕೊಂಡಿರುವ ಹೊರ ರಾಜ್ಯದವರ ಬಗ್ಗೆ ಮಾಹಿತಿ ಪಡೆಯುವಂತೆ ಸೂಚಿಸಿದ್ದಾರೆ. ಏನಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡಬಂದರೆ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಎಂಎ ಸಲೀಂ ಅವರು ಸೂಚಿಸಿದ್ದಾರೆ. ಅಲ್ಲದೆ, ವಿಶೇಷವಾಗಿ, ಮಲ್ಲೇಶ್ವರಂನಲ್ಲಿ ನಡೆಯುತ್ತಿರುವ ಕಡಲೇಕಾಯಿ ಪರಿಷೆ ಹಾಗೂ ಬಸವನಗುಡಿಯಲ್ಲಿ ನ. 17ರಿಂದ ಆರಂಭವಾಗುವ ಬಸವನಗುಡಿ ಕಡಲೆಕಾಯಿ ಪರಿಷೆಗೂ ಹೆಚ್ಚಿನ ಭದ್ರತೆಯನ್ನು ಒದಗಿಸಲು ಸೂಚಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಮಹಾ ನಿರ್ದೇಶಕರು ಸೂಚಿಸಲಾಗಿದೆ. ಅದರಂತೆ, ಎಲ್ಲಾ ಜಿಲ್ಲೆಗಳಲ್ಲಿನ ಮಾರುಕಟ್ಟೆಗಳು, ಸಿನಿಮಾ ಥಿಯೇಟರ್, ಜಾತ್ರೆ, ಸ್ಥಳೀಯ ಹಬ್ಬಗಳು – ಮೆರವಣಿಗೆಗಳಿಗೆ ವಿಶೇಷ ಭದ್ರತೆ ಕೊಡುವಂತೆ ಆದೇಶಿಸಿದ್ದಾರೆ.

