ಮಂಗಳೂರು : ಕಾರ್ಕಳದ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿದ್ದ ಯವತಿಯ ಅಶ್ಲೀಲ ಪೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಡಿ ಓರ್ವ ಯುವಕನನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾವೂರು ಆಕಾಶಭವನ ಕಾಪಿಗುಡ್ಡ ನಿವಾಸಿ ನಿಖಿಲ್ ರಾಜ್ (27) ಎಂದು ಗುರುತಿಸಲಾಗಿದೆ.
ಕದ್ರಿ ಠಾಣೆಯಲ್ಲಿ ಯುವತಿ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆತ ಉಪಯೋಗಿಸುತ್ತಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕಾರ್ಕಳ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಂತ್ರಸ್ತ ಯುವತಿಯ ಅಶ್ಲೀಲ ವೀಡಿಯೊ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ. ಮಾತ್ರವಲ್ಲದೆ ಯುವತಿಗೆ ತಾನು ನೇಣು ಹಾಕಿರುವ ಫೋಟೋಗಳನ್ನು ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ.
ಮುಂದುವರಿದು ಅಭಿಷೇಕ್ ಆಚಾರ್ಯನ ತಮ್ಮ ಅಭಿಜಿತ್ ಆಚಾರ್ಯ ಹಾಗೂ ಇತರರು ಅಭಿಷೇಕ್‌ನ ಡೆತ್‌ನೋಟ್ ಹಾಗೂ ಯುವತಿಯ ಅಶ್ಲೀಲ ಫೋಟೊಗಳನ್ನು ವಿವಿಧ ಸಾಮಾಜಿಕ ದೃಶ್ಯ ಮಾಧ್ಯಮಗಳಲ್ಲಿ ವೈರಲ್ ಮಾಡಿ ತೇಜೋವಧೆ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ.

ಯುವತಿ ಪರಿಶಿಷ್ಟ ಜಾತಿಗೆ ಸೇರಿರುವ ಹಿನ್ನೆಲೆಯಲ್ಲಿ ಪೊಲೀಸರು ಐಟಿ ಕಾಯ್ದೆ ಮತ್ತು ಎಸ್ ಸಿ-ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ರವಾನಿಸಲಾಗಿದ್ದ ಸಂದೇಶಕ್ಕೆ ಪೂರಕವಾಗಿ ಜಾತಿ ನಿಂದನೆಯ ಶಬ್ದವನ್ನು ಬಳಸಿದ ಪೂರಕ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ನಿಖಿಲ್ ರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಗೆ ಅಶ್ಲೀಲ ಸಂದೇಶ ರವಾನೆ ಕುರಿತಂತೆ ಎಸ್.ಸಿ/ಎಸ್.ಟಿ ಕಾಯ್ದೆಯಡಿ ಪ್ರರಕಣ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ರೀತಿಯ ಕೃತ್ಯದಲ್ಲಿ ಭಾಗಿಯಾದ ಎಲ್ಲ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೆಲವರು ಯುವತಿಯ ಅಶ್ಲೀಲ ಫೋಟೊ ಮತ್ತು ಸಂದೇಶಗಳನ್ನುಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಅಂತಹವರನ್ನೂ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.


