Mangalore and Udupi news
Blog

ಗೆಳತಿ ಜತೆ ಪಾರ್ಕ್ ನಲ್ಲಿ ಕುಳಿತ ವಿಡಿಯೋ ವೈರಲ್: ಯುವಕ ಆತ್ಮಹತ್ಯೆ

ಹಾಸನ: ಸ್ನೇಹಿತೆಯರ ಜೊತೆ ಪಾರ್ಕ್‌ನಲ್ಲಿದ್ದ ವೀಡಿಯೋವನ್ನು ಇನ್ಸ್ಟಾದಲ್ಲಿ ಅಪ್‌ಲೋಡ್ ಮಾಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲೂಕಿನ, ಕಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೊಸಳೆಹೊಸಳ್ಳಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿ.ಎ ವಿದ್ಯಾರ್ಥಿ ಪವನ್.ಕೆ (21) ಮೃತ ದುರ್ದೈವಿ.

ಸೆ. 17ರಂದು ಮಧ್ಯಾಹ್ನ ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಪವನ್, ಇಬ್ಬರು ಸ್ನೇಹಿತೆಯರ ಜೊತೆ ಕುಳಿತಿದ್ದ. ಈ ವೇಳೆ ಓರ್ವ ಯುವತಿಯ ಕೈ ಹಿಡಿದು ಪವನ್ ಆತ್ಮೀಯತೆಯಿಂದ ಮಾತನಾಡುತ್ತಿದ್ದ. ಈ ದೃಶ್ಯವನ್ನು ಅಪರಿಚಿತ ಯುವತಿಯೊಬ್ಬಳು ಮೊಬೈಲ್‌ನಲ್ಲಿ ಸೆರೆ ಹಿಡಿದು, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದಳು.

ಈ ಬಗ್ಗೆ ಯುವತಿಯು ಸಾಕಷ್ಟು ಟೀಕೆ ಜೊತೆಗೆ ವ್ಯಂಗ್ಯ ಸಂಭಾಷಣೆ ಮಾಡಿ ವೀಡಿಯೋ ಅಪ್‌ಲೋಡ್ ಮಾಡಿದ್ದಳು. ಈ ವೀಡಿಯೋವನ್ನು ಪವನ್ ಸಹಪಾಠಿಗಳು ಸೇರಿದಂತೆ ಅನೇಕರು ವೀಕ್ಷಣೆ ಮಾಡಿದ್ದರು. ಇದರಿಂದ ನನ್ನೊಂದಿಗಿದ್ದ ಯುವತಿಯರಿಗೆ ಏನಾದರೂ ತೊಂದರೆ ಆಗಲಿದೆ ಎಂದು ಭಾವಿಸಿ ಇನ್ಸ್ಟಾದಿಂದ ವೀಡಿಯೋ ಡಿಲೀಟ್ ಮಾಡಿಸಲು ಪವನ್ ಸಾಕಷ್ಟು ಪ್ರಯತ್ನ ಪಟ್ಟಿದ್ದ.

ಆದರೆ ಅದು ಸಾಧ್ಯವಾಗದೇ ಇದ್ದಾಗ, ಗುರುವಾರ ಕಾಲೇಜು ಮುಗಿಸಿ ಮನೆಗೆ ಹೋಗಿದ್ದ ಪವನ್, ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತಿಯನ್ನು ಕಳೆದುಕೊಂಡು ಗಾರೆ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.

ಪವನ್ ಸಾವಿಗೆ ಕಾರಣಳಾದ ಅಪರಿಚಿತ ಯುವತಿಯನ್ನು ಬಂಧಿಸುವಂತೆ ಪವನ್ ಕುಟುಂಬಸ್ಥರು ಆಗ್ರಹಿಸಿದ್ದು, ಮುಂದೆ ಯಾರಿಗೂ ಇಂತಹ ಮಾನಹಾನಿ ಆಗಬಾರದು. ಇದನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related posts

Leave a Comment