ಬೈಂದೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಕಂಡ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಕೇರಳ ಮೂಲದ ಕಾರ್ಮಿಕ ಬಿನೋ ಫಿಲಿಪ್ (45) ಎಂದು ಗುರುತಿಸಲಾಗಿದೆ. ಉದಯ ಕುಮಾರ (42) ಎಂಬಾತ ಕೊಲೆ ಮಾಡಿದ ಆರೋಪಿ.
ಉದಯ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಯಡ್ತರೆಯ ತೋಟ ಮಾಲೀಕರಾದ ಥೋಮಸ್ ಅವರ ತೋಟದಲ್ಲಿ ಬಿನೋ ಮತ್ತು ಉದಯ್ ಕಳೆದ ಎರಡು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಮದ್ಯಪಾನದ ಅಭ್ಯಾಸದಿಂದಾಗಿ ಇಬ್ಬರಲ್ಲೂ ಆಗಾಗ್ಗೆ ವಾಗ್ವಾದ ಉಂಟಾಗುತ್ತಿತ್ತು ಎಂಬ ಮಾಹಿತಿ ಲಭಿಸಿದೆ.
ಒಂದೇ ಶೆಡ್ ನಲ್ಲಿ ವಾಸವಿದ್ದ ಇಬ್ಬರ ನಡುವೆ ಶನಿವಾರ ರಾತ್ರಿ ಕೂಡಾ ಘರ್ಷಣೆ ನಡೆದಿದ್ದು, ಕೋಪಗೊಂಡ ಉದಯ್ ತೋಟದಲ್ಲಿ ಬಳಸುತ್ತಿದ್ದ ಚೂರಿಯಿಂದ ಬಿನೋಗೆ ಇರಿದ ಪರಿಣಾಮ ಬಿನೋ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ನೇತೃತ್ವದಲ್ಲಿ ಬೈಂದೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.