ಮಂಗಳೂರು: ಉಳ್ಳಾಲ ತಾಲೂಕು ಬೆಳ್ಳ ಗ್ರಾಮ ವಾಸಿ ಶ್ರೀಮತಿ ರಹಮತ್ ಎಂಬವರು ತನ್ನ ಮಕ್ಕಳೊಂದಿಗೆ ಜು. 02 ರಂದು ತೊಕ್ಕೊಟ್ಟು ಗ್ರಾಮದಲ್ಲಿರುವ ಸಾಗರ ಕಲೆಕ್ಷನ್ ಅಂಗಡಿಗೆ ತನ್ನ ಮಕ್ಕಳೊಂದಿಗೆ ಬಟ್ಟೆ ಖರೀದಿಸಲು ಹೋಗುತ್ತಿದ್ದಾಗ ಮಳೆ ಬಂದ ಕಾರಣ ಸ್ಟ್ರೀಟ್ ಪ್ಯಾಲೇಸ್ ಬೇಕರಿಯ ಮುಂದೆ ನಿಂತುಕೊಂಡಿದ್ದಾಗ ತನ್ನ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಯಾರೋ ಬುರ್ಖಾ ಧರಿಸಿದ್ದ ಹೆಂಗಸು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಆರೋಪಿ ಹಾಗೂ ಸೊತ್ತು ಪತ್ತೆಯ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಪ್ರಕರಣವನ್ನು ಬೇಧಿಸಿ ಮಾಹಿತಿಯ ಆಧಾರದ ಮೇಲೆ ಆರೋಪಿತೆಯಾದ ಉಳ್ಳಾಲದ ನಿವಾಸಿ ಶ್ರೀಮತಿ ಮಿನ್ನತ್ ಎಂಬಾಕೆಯನ್ನು ಸೆ.12 ರಂದು ವಶಕ್ಕೆ ಪಡೆದು ಸುಲಿಗೆ ಮಾಡಿದ 10ಗ್ರಾಂ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿತೆಯ ವಿಚಾರಣೆ ಸಮಯದಲ್ಲಿ ದಿನಾಂಕ 09-07-2025 ರಂದು ಪಜೀರ್ ಎಂಬಲ್ಲಿರುವ ಕೆ.ಎಮ್.ಎಸ್ ಕನ್ವೇನ್ ಹಾಲ್ ಗೆ ಮದುವೆ ಕಾರ್ಯಕ್ರಮದಲ್ಲಿ ಬ್ಯಾಗಿನಿಂದ 8 ಗ್ರಾಂ ತೂಕದ ಚಿನ್ನದ ಸರವನ್ನು ಕೂಡಾ ಕಳವು ಮಾಡಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ರಿ ಚಿನ್ನದ ಸರವನ್ನು ಸಹ ಈ ದಿನ ಅಮಾನತ್ತು ಪಡಿಸಲಾಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಆರೋಪಿತೆ ಶ್ರೀಮತಿ ಮಿನ್ನತ್ ಎಂಬಾಕೆಯಿಂದ ಸುಲಿಗೆಯಾಗಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಸರ ಸುಮಾರು 8 ಗ್ರಾಂ ತೂಕದ ಚಿನ್ನದ ಸರವನ್ನು (ಒಟ್ಟು ಮೌಲ್ಯ ರೂ 1,80,000/-) ವಶಪಡಿಸಿಕೊಂಡು ಆರೋಪಿತೆಯ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ತನಿಖೆಗ ನಡೆಸಲಾಗುತ್ತಿದೆ. ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.