ಕರ್ನಾಟಕ ಸರ್ಕಾರವು ಇದೀಗ ಮತ್ತೊಂದು ಧಾರ್ಮಿಕ ವಿವಾದವನ್ನು ಎದುರಿಸುತ್ತಿದೆ. ಇತ್ತೀಚೆಗೆ ಧರ್ಮಸ್ಥಳ ಪ್ರಕರಣ ಹಾಗೂ ಮೈಸೂರು ದಸರಾ ಉದ್ಘಾಟನೆ ವಿಷಯದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದು. ದಸರಾ ಉದ್ಘಾಟನೆ ವಿಚಾರದಲ್ಲಿ ಅನವಶ್ಯಕವಾದ ವಿವಾದ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿರುವ ಮಾತುಗಳು ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು. ಈ ರೀತಿ ಇರುವಾಗಲೇ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ.
ಪ್ರಾಥಮಿಕ ಶಾಲೆಗಳ 1ರಿಂದ 7ನೇ ತರಗತಿಯ ಮಕ್ಕಳಲ್ಲಿ ಓದಿನ ಅಭ್ಯಾಸ ಬೆಳೆಸುವ ಹೆಸರಿನಲ್ಲಿ ಕರ್ನಾಟಕ ಸರ್ಕಾರ “ರೂಮ್ ಟು ರೀಡ್” ಯೋಜನೆಗೆ ಸಂಬಂಧಿಸಿದ ಸರ್ಕ್ಯುಲರ್ ಹೊರಡಿಸಿದ್ದು ಇದೀಗ ಈ ವಿಷಯವು ವಿವಾದ ಸ್ವರೂಪ ಪಡೆದುಕೊಂಡಿದೆ. ಈ ವಿಚಾರದ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು, ಪ್ರಾಥಮಿಕ ಶಾಲೆಗಳ 1ರಿಂದ 7ನೇ ತರಗತಿಯ ಮಕ್ಕಳಲ್ಲಿ ಓದಿನ ಅಭ್ಯಾಸ ಬೆಳೆಸುವ ಹೆಸರಿನಲ್ಲಿ ಕರ್ನಾಟಕ ಸರ್ಕಾರ “ರೂಮ್ ಟು ರೀಡ್” ಯೋಜನೆಗೆ ಸಂಬಂಧಿಸಿದ ಸರ್ಕ್ಯುಲರ್ ಹೊರಡಿಸಿದೆ. ಪುಸ್ತಕ ಮತ್ತು ಲೈಬ್ರರಿಗಳ ಮಹತ್ವವನ್ನು ಪ್ರೋತ್ಸಾಹಿಸುವಂತೆ ಕಂಡರೂ, ಇದರೊಳಗೆ ಬಚ್ಚಿಟ್ಟಿರುವ ಅಸಲಿ ಉದ್ದೇಶವೇ ಬೇರೆ ಎನ್ನುವುದು ಸ್ಪಷ್ಟವಾಗಿದೆ. ಸರ್ಕ್ಯುಲರ್‌ನಲ್ಲಿ ಸೇರಿಸಿರುವ QR ಕೋಡ್ ವಿದ್ಯಾರ್ಥಿಗಳನ್ನು ಈದ್ ಮಿಲಾದ್ ಕುರಿತು ಮಾತ್ರ ಓದಲು ಹಾಗೂ ತಿಳಿದುಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ತಟಸ್ಥವಾಗಿ ಶಿಕ್ಷಣ ನೀಡಬೇಕಾದ ಸರ್ಕಾರ, ಒಂದು ಧರ್ಮಕ್ಕೆ ಮಾತ್ರ ವಿಶೇಷ ಪ್ರೋತ್ಸಾಹ ನೀಡುವುದು ಮಕ್ಕಳ ಮನಸ್ಸಿನ ಮೇಲೆ ಏಕಪಕ್ಷೀಯ ಪ್ರಚಾರ ಹೇರಿದಂತಾಗಿದೆ. ಹಿಂದೂ ಹಬ್ಬಗಳಿಗೆ ನೂರಾರು ಕಾನೂನುಗಳನ್ನು ತರುವ ನೀವು – ಮುಸಲ್ಮಾನರ ಹಬ್ಬಗಳಿಗೆ ಹೆಚ್ಚಿನ ಅವಕಾಶಗಳನ್ನು ಮಾಡಿಕೊಡುತ್ತಿರಿ, ಈ ನಮ್ಮ ಸೆಲೆಕ್ಟೀವ್ ಸೆಕ್ಯುಲರಿಸಮ್ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು ಇಂತಹ ತುಷ್ಟೀಕರಣ ರಾಜಕಾರಣವನ್ನು ಶಿಕ್ಷಣದ ಹೆಸರಿನಲ್ಲಿ ಮುಂದೂಡುವುದು ಕಾಂಗ್ರೆಸ್ ಸರ್ಕಾರದ ಸೆಲೆಕ್ಟೀವ್ ಸೆಕ್ಯುಲರಿಸಮ್‌ನ ಜೀವಂತ ಉದಾಹರಣೆ. ತುಷ್ಟೀಕರಣಕ್ಕೂ ಒಂದು ಇತಿ – ಮಿತಿ ಬೇಡವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ. ಶಾಲೆಗಳು ಜ್ಞಾನ ಮಂದಿರವಾಗಲಿ, ಸರ್ಕಾರದ ಮತಬೇಟೆ ರಾಜಕೀಯದ ಪ್ರಯೋಗಾಲಯವಾಗಬಾರದು ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಬಿಜೆಪಿ ಖಾತೆಯಿಂದ ಮರು ಟ್ವೀಟ್ ಮಾಡಲಾಗಿದೆ.