Mangalore and Udupi news
Blog

ಜಮ್ಮು ಕಾಶ್ಮೀರ ವೈಷ್ಣೋದೇವಿ ಯಾತ್ರೆ ಮಾರ್ಗದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 30ಕ್ಕೆ ಏರಿಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳಲ್ಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಮಂಗಳವಾರ ಸಂಭವಿಸಿದ್ದ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಅರ್ಧಕುವರಿಯ ಇಂದ್ರಪ್ರಸ್ಥ ಭೋಜನಾಲಯದ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿತ್ತು. ಹತ್ತಾರು ಮಂದಿ ಸಿಲುಕಿದ್ದರು. ನಿರಂತರ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಇತರ ಪ್ರದೇಶಗಳಲ್ಲಿಯೂ ಹಾನಿ ಸಂಭವಿಸಿದೆ.

ವಿದ್ಯುತ್ ಕಂಬಗಳು ಮತ್ತು ಮೊಬೈಲ್ ಟವರ್‌ಗಳಿಗೆ ಹಾನಿಯಾಗಿರುವುದರಿಂದ ದೂರಸಂಪರ್ಕ ಸೇವೆಗಳು ಸ್ಥಗಿತಗೊಂಡಿವೆ. ಜಮ್ಮು-ಶ್ರೀನಗರ ಮತ್ತು ಕಿಶ್ತ್ವಾರ್-ದೋಡಾ ರಾಷ್ಟ್ರೀಯ ಹೆದ್ದಾರಿಗಳು ಮುಚ್ಚಲ್ಪಟ್ಟಿವೆ. ಅನೇಕ ಪರ್ವತ ರಸ್ತೆಗಳು ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಹಾನಿಗೊಳಗಾಗಿವೆ.

ಸದ್ಯ, ಗಾಯಗೊಂಡ ಯಾತ್ರಿಕರನ್ನು ಕತ್ರಾ ಮತ್ತು ಜಮ್ಮುವಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಂಬಂಧಿಕರ ಬಗ್ಗೆ ಮಾಹಿತಿ ಪಡೆಯಲು ಆಸ್ಪತ್ರೆಗಳು ಮತ್ತು ಮೂಲ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಿದ್ದಾರೆ. ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳ ಮೂರು ತುಕಡಿಗಳು ಕತ್ರಾ, ಠಾಕೂರ್ ಕೋಟ್ ಮತ್ತು ಜೌರಿಯನ್ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿವೆ.

Related posts

Leave a Comment