ಉಡುಪಿ ಜಿಲ್ಲೆಯ ಅಭಿನವ ಭಾರತ ಎಂಬ ಸಂಘಟನೆಯು ನಾಗರ ಪಂಚಮಿಯ ಪ್ರಯುಕ್ತ ಜಿಲ್ಲೆಯಾದ್ಯಂತ 1008 ದೈವಿಕ ಹಿನ್ನೆಲೆಯುಳ್ಳ ಗಿಡಗಳನ್ನು ನೆಡುವ ಮೂಲಕ ವಿನೂತನವಾಗಿ ವನ ಪಂಚಮಿ ಎಂಬ ಕಾರ್ಯಕ್ರಮವನ್ನು ನಡೆಸಿದೆ.
ಸಂಘಟನೆಯ ಕಾರ್ಯಕರ್ತರು ಇತ್ತೀಚೆಗೆ ನವೀಕರಣಗೊಂಡಿರುವ ನಾಗಬನಗಳನ್ನು ಸಂಪರ್ಕಿಸಿ, ಅವುಗಳ ಸುತ್ತಮುತ್ತ ಆಲ ಅಶ್ವತ, ಅರ್ಜುನ ,ಬಕುಳ, ಸೀತಾ ಅಶೋಕ , ಮಾವು, ಹೆಬ್ಬಲಸು, ಜಾರಿಗೆ , ನಾಗಸಂಪಿಗೆ,ನಾಗಲಿಂಗ, ಕಿರಾಲು ಭೋಗಿ, ನೇರಳೆ, ಔದುಂಬರ, ಮುಂತಾದ ಇಪ್ಪತ್ತಕ್ಕೂ ಅಧಿಕ ಪ್ರಭೇದದ ಗಿಡಗಳನ್ನು ನೆಟ್ಟಿದ್ದಾರೆ.
ತುಳುನಾಡಿನ ನಾಗಬನಗಳು ವನಸ್ಪತಿಗಳಿಂದ ಸಮೃದ್ಧವಾಗಿದ್ದು ಇತ್ತೀಚೆಗೆ ನವೀಕರಣದ ಭರಾಟೆಯಲ್ಲಿ ಸಂಪೂರ್ಣ ಕಾಂಕ್ರೀಕರಣ ಗೊಳ್ಳುತ್ತಿವೆ. ಸಾಂಪ್ರದಾಯಿಕ ನಿಸರ್ಗದತ್ತ ನಾಗಬನಗಳನ್ನು ನಿರ್ಮಿಸುವಂತೆ ಜನರನ್ನು ಪ್ರೋತ್ಸಾಹಿಸಲು ಸಾಂಕೇತಿಕವಾಗಿ ಈ ಅಭಿಯಾನವನ್ನು ನಡೆಸಲಾಗಿದೆ ಎಂದು ಸಂಘಟನೆಯ ಆಯೋಜಕರು ತಿಳಿಸಿದ್ದಾರೆ.