ಮಂಗಳೂರು : ಶಾಂತಿ ಸುವ್ಯವಸ್ಥೆ ನೆಪದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಪೊಲೀಸರು ನಿಯಮಗಳನ್ನು ವಿಧಿಸುತ್ತಿರುವದನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶರಣ್ ಪಂಪ್ ವೆಲ್ ಕಾನೂನು ವ್ಯವಸ್ಥೆ ಕುರಿತಂತೆ ಪೊಲೀಸರು ತೆಗೆದುಕೊಂಡಿರುವ ಕ್ರಮಗಳನ್ನು ವಿಶ್ವಹಿಂದೂ ಪರಿಷತ್ ಸ್ವಾಗತಿಸಿದ್ದೇವೆ. ಆದರೆ ತುಳುನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೋಸ್ಕರ ದೇಶದ ವಿವಿದೆಡೆಗಳಿಂದ ಜನರ ಬರುತ್ತಾರೆ. ಇಂತಹ ಸಂಸ್ಕೃತಿಯನ್ನು ಮೊಟಕುಗೊಳಿಸುವುದು ಸರಿಯಲ್ಲ. ಇದನ್ನೆ ನಂಬಿ ತುಂಬಾ ಜನ ಜೀವನ ನಡೆಸುತ್ತಿದ್ದಾರೆ. ಈ ಕುರಿತಂತೆ ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಪೊಲೀಸ್ ಇಲಾಖೆಗೆ ಜಿಲ್ಲೆಯ ಬಗ್ಗೆ ಮನವರಿಕೆ ಮಾಡಬೇಕು ಹಾಗೂ ಈ ಹಿಂದೆ ಜಿಲ್ಲೆಯಲ್ಲಿ ಹಬ್ಬಗಳು ನಡೆಯುತ್ತಿತ್ತೋ ಅದೇ ರೀತಿ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದ್ದೇವೆ ಎಂದರು.
ಹಲವಾರು ವರ್ಷಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಬ್ಬಗಳು ನಡೆದಿದೆ. ಪೊಲೀಸ್ ಇಲಾಖೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಬ್ಬಗಳ ಸಂದರ್ಭ ಗಲಾಟೆ ನಡೆದಿರುವ ಬಗ್ಗೆ ದಾಖಲೆ ಕೊಡಲಿ. ಕುದ್ರೋಳಿ ದಸರಾವನ್ನು 11 ಗಂಟೆಯೊಳಗೆ ಮುಗಿಸಬೇಕು ಅಂದರೆ ಹೇಗೆ ಎಂದು ಪ್ರಶ್ನಿಸಿದರು. ಪೊಲೀಸ್ ಇಲಾಖೆ ಇಲ್ಲಿಯ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದರು.