ಮಂಗಳೂರು : ನಗರದ ಸಿಸಿಬಿ ತಂಡವು ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಕೈಗೊಂಡಿರುವ ಭಾಗವಾಗಿ ಇಂದು ದೊಡ್ಡ ಪ್ರಮಾಣದ 123 ಕೆಜಿ ಗಾಂಜಾ ಮತ್ತು ಅದನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮೂರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಎರಡು ಕಾರುಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು, ಮೂಡಬಿದಿರೆ ತಾಲ್ಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ ನ ಮಠದಕೆರೆ ಎಂಬ ಸ್ಥಳದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾ ಸಮೇತ 2 ವಾಹನಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿರುತ್ತಾರೆ.
ಕಾಸರಗೋಡು ನಿವಾಸಿ ಮಸೂದ್ ಎಂ.ಕೆ, ಮೊಹಮ್ಮದ್ ಆಶಿಕ್, ಸುಬೇರ್ ಮೂರು ಮಂದಿ ಆರೋಪಿಗಳು ಕಾಸರಗೋಡು ನಿವಾಸಿಗಳಾಗಿರುತ್ತಾರೆ. ಬಂಧಿತ ಆರೋಪಿಗಳಿಂದ 123 ಕೆಜಿ ಗಾಂಜಾ, ಎರಡು ವಾಹನಗಳು (KA-21-P-9084 ಹಾಗೂ KL-14-AF-7010) ಮತ್ತು 5 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದು, ಈ ಎಲ್ಲಾ ಸೊತ್ತಿನ ಒಟ್ಟು ಮೌಲ್ಯ ಸುಮಾರು 46,20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಂಗಳೂರು ನಗರ ಪೊಲೀಸರಿಂದ ನಿರಂತರವಾಗಿ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯು ಮುಂದುವರೆದಿರುತ್ತದೆ, ಈ ಬೃಹತ್ ಗಾಂಜಾ ಮಾರಾಟ, ಸಾಗಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಸಿಬಿ ಘಟಕದ ಸಿಬ್ಬಂಧಿಗಳು ಪಾಲ್ಗೊಂಡಿದ್ದರು.