ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ವೇಳೆ ದುರ್ಘಟಣೆ
ಕೊಡಗು: ಜಿಲ್ಲೆಯ ದೇವರಕೊಲ್ಲಿಯಲ್ಲಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟಿದ್ದಾರೆ. ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ.
ಜಿಲ್ಲೆಯ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಸಮೀಪದ ಕೊಯಿನಾಡು ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ ನಾಲ್ವರು ಯುವಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಈ ದುರ್ಘಟನೆ ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ರ ದೇವರಕೊಲ್ಲಿ ಎಂಬಲ್ಲಿ ಶುಕ್ರವಾರ ಸಂಭವಿಸಿದೆ. ಲಾರಿ ಹಾಗೂ ಕಾರು ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಮಿಕ್ಕ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾರೆ.
ಮೃತಪಟ್ಟವರನ್ನು ನಿಹಾದ್, ರಿಷಾನ್, ರಷಿಬ್ ಹಾಗೂ ಇನ್ನೊಬ್ಬ ಯುವಕನ ಗುರುತು ಪತ್ತೆಯಾಗಿಲ್ಲ. ಮೃತರೆಲ್ಲರೂ ಕೊಡಗು ಜಿಲ್ಲೆಯ ಗೋಣಿಕೊಪ್ಪ ಮೂಲದವರಾಗಿದ್ದಾರೆ. ಅಪಘಾತದ ವೇಳೆ ಕಾರು ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿತ್ತು. ಕಾರಿನಲ್ಲಿದ್ದ ನಾಲ್ಕು ಮಂದಿ ಗುರುವಾರ ಉಳ್ಳಾಲಕ್ಕೆ ಹೋಗಿ ಹಿಂತಿರುಗುವಾಗ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ತೆರವಿನ ಕಾರ್ಯ ನಡೆಯುತ್ತಿದೆ.