
ಉಡುಪಿ: ಸ್ಟಾರ್ ಹೋಟೆಲ್‌ಗಳಲ್ಲಿಯೇ ಇದ್ದುಕೊಂಡು, ಅಲ್ಲೇ ತಿಂದುಕೊಂಡು ಅಲ್ಲಿನ ಸಿಬ್ಬಂದಿಗಳಿಗೆ ಮಣ್ಣೆರಚಿ ಲಕ್ಷಾಂತರ ವಂಚನೆ ಮಾಡಿದ ಆರೋಪದ ಮೇಲೆ ವೃದ್ಧನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತೂತುಕುಡಿಯ ಬಿಮ್ಸೆಂಟ್ ಜಾನ್ (67) ಬಂಧಿತ ಆರೋಪಿ. ಈತನ ಮೇಲೆ ಈಗಾಗಲೇ ಬರೋಬ್ಬರಿ 49 ಕ್ಕೂ ಹೆಚ್ಚು ಪ್ರಕರಣಗಳಿವೆ.
ದೇಶದ ವಿವಿಧೆಡೆ ಪ್ರತಿಷ್ಠಿತ ಹೋಟೆಲ್‌ಗಳಿಗೆ ವೃದ್ಧ ವಂಚಿಸುತ್ತಿದ್ದ. ಫೈವ್‌ಸ್ಟಾರ್ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ. ಡಿ.7 ರಂದು ಮಣಿಪಾಲ ಕಂಟ್ರಿ ಇನ್ ಹೋಟೆಲ್‌ನಲ್ಲಿ ರೂಮ್ ಪಡೆದುಕೊಂಡಿದ್ದ. ಮುಂಗಡ ಹಣವನ್ನು ಡಿ.9 ರಂದು ಕೊಡುವುದಾಗಿ ಹೇಳಿದ್ದ. ಡಿ.12 ರಂದು ರೂಮ್ ಚೆಕ್‌ಔಟ್ ಮಾಡುತ್ತೇನೆ ಎಂದು ಹೋಟೆಲ್ ಮ್ಯಾನೇಜರ್‌ನ್ನು ನಂಬಿಸಿದ್ದ. ಹೋಟೆಲ್‌ನಲ್ಲಿಯೇ ಊಟ, ತಿಂಡಿ ಮಾಡಿ ಒಟ್ಟು 39,298ರೂ. ಬಿಲ್ ಮಾಡಿದ್ದ. ಹಣ ಕೊಡದೇ ಪರಾರಿಯಾಗಿ ನಂಬಿಸಿ ಮೋಸ ಮಾಡಿದ್ದ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಕಾರ್ಯಾಚರಣೆ ನಡೆಸಿ, ಆರೋಪಿ ಜೋನ್‌ನನ್ನು ಮಣಿಪಾಲದಲ್ಲೇ ಬಂಧಿಸಿದ್ದಾರೆ.
ದೆಹಲಿ, ಮಹಾರಾಷ್ಟ್ರ ಥಾಣೆ, ಕೇರಳದ ಕೊಲ್ಲಂ ಸೇರಿದಂತೆ ಹಲವು ರಾಜ್ಯಗಳಲ್ಲಿ ವಂಚನೆ ಮಾಡಿರುವುದು ಗೊತ್ತಾಗಿದೆ. ಪ್ರತಿಷ್ಠಿತ ಫೈವ್‌ಸ್ಟಾರ್ ಹೋಟೆಲ್‌ಗಳಲ್ಲಿ ರೂಮ್ ಪಡೆದುಕೊಂಡು ವಂಚನೆ ಮಾಡುತ್ತಿದ್ದ.
ಸಾವಿರಾರು ರೂ. ಬಿಲ್ ಮಾಡಿ, ಬಳಿಕ ಹಣ ಪಾವತಿಸದೇ ಪರಾರಿಯಾಗಿ ವಂಚಿಸುತ್ತಿದ್ದ. ಪದವೀಧರನಾಗಿರುವ ಈತನ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 49 ಪ್ರಕರಣಗಳು ದಾಖಲಾಗಿವೆ. ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.