
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯಿಂದ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದ್ದು, 2024ರ ಜುಲೈಯಿಂದ ಇಲ್ಲಿಯವರೆಗೆ ಒಟ್ಟು 31 ಪ್ರಕರಣಗಳು ದಾಖಲಾಗಿದೆ.
ಪ್ರಮುಖವಾಗಿ ದ.ಕ. ಜಿಲ್ಲೆಯಲ್ಲಿ ಗೋವಾ ಮದ್ಯ/ಹೊರರಾಜ್ಯದ ಮದ್ಯ/ಡಿಫೆನ್ಸ್ ಮದ್ಯ/ ತೆರಿಗೆರಹಿತ ವಿದೇಶೀ ಮದ್ಯದ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 2024ರ ಜುಲೈಯಿಂದ ಇಲ್ಲಿಯವರೆಗೆ ಒಟ್ಟು 31 ಪ್ರಕರಣಗಳನ್ನು ದಾಖಲಿಸಿ, 115.350 ಲೀಟರ್ ಗೋವಾ ಮದ್ಯ, 47.250 ಲೀಟರ್ ಡಿಫೆನ್ಸ್ ಮದ್ಯ, 140.940 ಲೀಟರ್ ಅಕ್ರಮ ಮದ್ಯ, 56.570 ಲೀಟರ್ ಬಿಯರ್. 244.920 ಲೀಟರ್ ವೈನ್ 115 ಲೀಟರ್ ಶೇಂದಿ, 92 ಲೀಟರ್ ಬೆಲ್ಲದ ಕೊಳೆ, 64.750 ಲೀಟರ್ ಕಳ್ಳಭಟ್ಟಿ ಸೇರಿ ಒಟ್ಟು 876.780 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
4 ವಾಹನಗಳು ಸೇರಿದಂತೆ ಒಟ್ಟು 9,31,638 ರೂ. ಮೊತ್ತದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದ.ಕ. ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.