
ಕೇರಳದ ಕೊಟ್ಯಾಯಂನಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ರ್‍ಯಾಗಿಂಗ್ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳನ್ನು ಸಂಪೂರ್ಣ ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಿದ ಘಟನೆ ನಡೆದಿದೆ. ಸದ್ಯ ಕೊಟ್ಟಾಯಂ ಜಿಲ್ಲೆಯ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಮೂವರು ಜ್ಯೂನಿಯರ್ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.
ಐವರು ಆರೋಪಿಗಳು ಮೂವರು ವಿದ್ಯಾರ್ಥಿಗಳನ್ನು ಅದ್ಯಾವ ರೀತಿ ಚಿತ್ರಹಿಂಸೆ ನೀಡಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ಪೊಲೀಸರ ಮುಂದೆ ವಿವರಿಸಿದ್ದಾರೆ. ಮೂವರು ಜ್ಯೂನಿಯರ್ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ವಿವಸ್ತ್ರಗೊಳಿಸಿ ಅವರ ಖಾಸಗಿ ಭಾಗಗಳಿಗೆ ಡಂಬಲ್ಸ್ ಕಟ್ಟಿ ಚಿತ್ರಹಿಂಸೆ ನೀಡಿದ್ದಾರೆ. ಅದು ಮಾತ್ರವಲ್ಲ ಜಾಮಿಟ್ರಿ ಬಾಕ್ಸ್ನಿಂದ ಹೊಡೆದು ಮೂರು ತಿಂಗಳುಗಳ ಕಾಲ ರಕ್ತ ಬರುವಂತೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೂವರು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮೊದಲ ವರ್ಷದ ಮೂವರು ನರ್ಸಿಂಗ್ ಹೋಮ್ ವಿದ್ಯಾರ್ಥಿಗಳು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಈಗ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆ್ಯಂಟಿ ರ್‍ಯಾಗಿಂಗ್ ಆಕ್ಟ್ ಅಡಿ ಆರೋಪಿಗಳ ಬಂಧನವಾಗಿದ್ದು, ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಸಸ್ಪೆಂಡ್ ಕೂಡ ಮಾಡಲಾಗಿದೆ. ಈಗಾಗಲೇ ಐವರನ್ನೂ ಪೊಲೀಸರು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.
ಜಾಮಿಟ್ರಿ ಕಂಪಾಸ್ಸ್ನಿಂದ ಜ್ಯೂನಿಯರ್ ವಿದ್ಯಾರ್ಥಿಗಳನ್ನು ಹೊಡೆದು ಚಿತ್ರಹಿಂಸೆ ಮಾಡಿ ಅದೆಲ್ಲವನ್ನು ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬೇರೆಯವರಿಗೆ ಹೇಳಿದರೆ, ಮುಂದಿನ ಪರಿಣಾಮ ಸರಿಯಿರಲ್ಲ, ನಿಮ್ಮ ಅಕಾಡೆಮಿಕ್ ಕೆರಿಯರ್ ಕೂಡ ಹಾಳಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಜೊತೆಗೆ ಪ್ರತಿ ಭಾನುವಾರ ಮದ್ಯಸೇವನೆಗೆ ಜ್ಯೂನಿಯರ್ ವಿದ್ಯಾರ್ಥಿಗಳಿಂದ ತಪ್ಪದೇ ಹಣ ವಸೂಲಿ ಮಾಡುತ್ತಿದ್ದರಂತೆ. ಹಣ ನೀಡಲು ನಿರಾಕರಿಸಿದರೆ ಹೊಡೆದು ಹಿಂಸೆ ಮಾಡುತ್ತಿದ್ದರಂತೆ.
ಈ ಎಲ್ಲಾ ಹಿಂಸೆಗಳನ್ನು ತಾಳಲಾರದೆ ತಮ್ಮ ಮನೆಗೆ ಹೋಗಿ ತಂದೆಯ ಬಳಿ Ragging ವಿಚಾರವನ್ನು ಬಿಚ್ಚಿಟ್ಟಿದ್ದಾನೆ ಓರ್ವ ವಿದ್ಯಾರ್ಥಿ. ಬಳಿಕ ಪೊಲೀಸರಿಗೆ ದೂರು ನೀಡಿದ್ದು. ಪೊಲೀಸರು ಕೂಡಲೇ ಕ್ರಮ ತೆಗೆದುಕೊಂಡಿದ್ದಾರೆ. ಐವರು ವಿದ್ಯಾರ್ಥಿಗಳನ್ನು ಬಂಧಿಸಿ ಇಂದು ಕೋರ್ಟಿಗೆ ಹಾಜರುಪಡಿಸಲಿದ್ದಾರೆ ಪೊಲೀಸರು. ಕಳೆದ ಕೆಲವು ವಾರಗಳ ಹಿಂದೆ ಕೊಚ್ಚಿಯಲ್ಲಿ ನಡೆದ ರ್‍ಯಾಗಿಂಗ್ ನಿಂದಾಗಿ 15 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರ ಬೆನ್ನಲ್ಲೆ ಮತ್ತೊಂದು ಭೀಕರ ರ್‍ಯಾಗಿಂಗ್ ಪ್ರಕರಣ ಈಗ ಬೆಳಕಿಗೆ ಬಂದಿದೆ.