ಬರಹ: ಹಂಸಿ ವಿಟ್ಲ
ಹಿಮ ಕಣಿವೆಯಲ್ಲಿ ಹುಟ್ಟಿದ ಚೆಲುವೆ ಈಕೆ… ದಿಟ್ಟ ನೋಟ ಮಂದಸ್ಮಿತೆ… ಮುಖ ನೋಡುವಾಗ ಆಕೆಗೇನೂ ಕಡಿಮೆ ಇಲ್ಲ ಅಂತ ಅನಿಸುತ್ತೆ. ಕೈಗಳಿಲ್ಲದಿದ್ದರೆ ಭವಿಷ್ಯವೇ ಇಲ್ಲ ಎಂದವರ ಮುಖಕ್ಕೆ ಹೊಡೆದ ಹಾಗೆ ಸಾಧನೆ ಮಾಡಿದ ಅಪ್ರತಿಮ ಸಾಧಕಿ, ಪ್ಯಾರ ಆರ್ಚರ್ ಶೀತಲ್ ದೇವಿ.
“ಮೊದಲು ನಿಮ್ಮನ್ನು ನೀವು ಜಯಿಸಿ. ಆಗ ಮಾತ್ರ ಇಡೀ ಜಗತ್ತನ್ನು ಜಯಿಸಬಹುದು” ಎಂಬುದು ಸ್ವಾಮಿ ವಿವೇಕಾನಂದರ ಆಶಯ. ನಮ್ಮನ್ನು ನಾವು ಅರಿತರೆ ಮಾತ್ರ ನಮ್ಮಲ್ಲೇ ಅಡಗಿರುವ ಅತ್ಯದ್ಭುತ ಶಕ್ತಿ ಸಾಮರ್ಥ್ಯಗಳನ್ನು ಜಗತ್ತಿಗೆ ತೆರೆಯಲು ಸಾಧ್ಯ. ಜೀವನವೆಂಬ ರಥವು ಭಗವಂತನದ್ದಾದರೆ ಅದರ ತಿರುವು, ವೇಗ ನಮ್ಮ ಕೈಯಲ್ಲೇ ಇರುತ್ತದೆ. ಸಾಧನೆಯೇ ಮನುಷ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿಸುತ್ತದೆ ಎಂಬ ಮಾತಿದೆ. ತನ್ನ ಧೈಹಿಕ ಆರೋಗ್ಯ ಉತ್ತಮ ರೀತಿಯಲ್ಲಿದ್ದರೂ, ತನ್ನದೇ ಕೆಲಸವನ್ನು ಇನ್ನೊಬ್ಬರ ಕೈಯಿಂದ ಕೆಲಸ ಮಾಡಿಸುವ ಈ ಕಾಲದಲ್ಲಿ, ತನ್ನ ಎರಡೂ ಕೈಗಳಿಲ್ಲದೆ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದು, ಬೀಗಿದ ಶೀತಲ್ ದೇವಿ ಸಾಧನೆ ಪ್ರಪಂಚವೇ ಮೆಚ್ಚುವಂತದ್ದು.
2007 ಜನವರಿ 10 ರಲ್ಲಿ ಜಮ್ಮು ಕಾಶ್ಮೀರದ ಕಿಶ್ತ್ವಾರ್ ನ ಲೋಯೀಧಾರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಶೀತಲ್ ದೇವಿಯ ತಂದೆ ತಾಯಿ ಕೃಷಿಕರು. ಹುಟ್ಟಿನಿಂದಲೇ ಫೋಕೊಮೆಲಿಯಾ ಎಂಬ ಕಾಯಿಲೆಗೆ ತುತ್ತಾದ ಶೀತಲ್ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡರು. ಆದರೆ ತಾನು ಯಾರಿಗೂ ಕಡಿಮೆ ಏನಿಲ್ಲ ಎಂದು ಬಾಲ್ಯದಲ್ಲಿಯೇ ಎಲ್ಲರಿಗೂ ಮನದಟ್ಟು ಮಾಡಿಸಿದರು. ಶಾಲಾ ಶಿಕ್ಷಣ ಪೂರೈಸುವಾಗಲೇ ಕಾಲುಗಳ ಸಹಾಯದಿಂದ ಬರೆದರು. ಕಣ್ಣಿಗೆ ಕಾಡಿಗೆ ಹಾಕುವುದರಿಂದ ತೊಡಗಿ ಕಾಲಿನಲ್ಲಿ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಕರಗತ ಮಾಡಿಕೊಂಡರು. ಸರಸರನೇ ಮರವೇರಿ ತನ್ನ ಸಾಮರ್ಥ್ಯ ಎಲ್ಲರಿಗೂ ತೋರಿಸಿದರು. ಛಲ ಬಿಡದ ಶೀತಲ್ ಏನನ್ನಾದರೂ ಸಾಧಿಸಬೇಕೆಂಬ ಉತ್ಸಾಹದೊಂದಿಗೆ ಆರ್ಚರಿ ಕಲಿಯಲು ಶುರುಮಾಡಿದರು. ಆರಂಭದಲ್ಲಿ ಬಿಲ್ಲು ಎತ್ತಲು ಕೂಡ ಸಾಧ್ಯವಾಗದಿದ್ದರೂ ಕಠಿಣ ಅಭ್ಯಾಸ, ನಿರಂತರ ಪ್ರಯತ್ನ, ಆಸಕ್ತಿಯೊಂದಿಗೆ ತನ್ನ ಬಲಗಾಲಿನಿ0ದ ಬಿಲ್ಲು ಎತ್ತಲು ಪ್ರಾರಂಭಿಸಿದ್ದೇ ಅದ್ಭುತ. ಬಲಗಾಲಿನಿಂದ ಬಿಲ್ಲನ್ನು ಮೇಲ ಕ್ಕೆತ್ತಿ, ಬಲ ಭುಜದಿಂದ ಧಾರವನ್ನು ಎಳೆದು ತನ್ನ ದವಡೆಯಿಂದ ಬಿಲ್ಲು ಬಿಡುವುದನ್ನು ನೋಡುವುದೇ ರೋಚಕ.
2021 ರಲ್ಲಿ ಭಾರತೀಯ ಸೇನೆಯ ರಾಷ್ಟೀಯ ರೈಫಲ್ ಯೂನಿಟ್ ಕಿಷ್ಟವಾಡದಲ್ಲಿ ಒಂದು ಯುವಜನತಾ ಮಹೋತ್ಸವ ಇಟ್ಟುಕೊಂಡಿತ್ತು. ಇದೇ ಕಾರ್ಯಕ್ರಮಕ್ಕೆ ಭಾಗವಹಿಸಿದ ಶೀತಲ್ ದೇವಿ ಭಾರತೀಯ ಸೇನೆಯ ಕೋಚ್ ಗಳ ಕಣ್ಣಿಗೆ ಬಿದ್ದರು. ಈಕೆಯ ಕಣ್ಣಲ್ಲಿ ಸಾಧನೆಯ ಹಸಿವನ್ನು ಕಂಡ ಸೇನಾಧಿಕಾರಿಗಳು ಸಹಾಯ ಮಾಡಲು ಮುಂದಾಗಿ ಕೃತಕ ಕೈಗಳನ್ನು ಜೋಡಿಸಿದರು. ಆದರೆ ಶೀತಲ್ ರ ಮೇಲ್ಭಾಗದ ದೇಹವು ಬಲವಾಗಿದ್ದರಿಂದ ಕೃತಕ ಕೈಗಳು ಕೆಲಸ ಮಾಡಲ್ಲ ಎಂದು ವೈದ್ಯರು ತಿಳಿಸಿದರು. ಸಾಮಾನ್ಯ ಜನರಿಗಿಂತ ಬೇಗನೆ ಮರ ಏರುವ ಸಾಮರ್ಥ್ಯ ಇದ್ದರಿಂದ ಶೀತಲ್ ಮೇಲ್ಭಾಗದ ದೇಹ ಮತ್ತು ಕಾಲುಗಳು ಬಲಿಷ್ಠವಾಗಿದ್ದವು. ಈ ಕಾರಣದಿಂದಲೇ ಎಲ್ಲರಿಗೂ ಆರ್ಚರಿ ಕಲಿಸಲು ಹೊಳೆದರೂ ಕೈಗಳೇ ಇಲ್ಲದ ಬಾಲಕಿಗೆ ಬಿಲ್ವಿದ್ಯೆ ಕಳಿಸೋದು ಹೇಗೆ ಅನ್ನೋ ಪ್ರಶ್ನೆ ಎದುರಾಯಿತು. ಈ ಸಮಯದಲ್ಲೇ ಆರ್ಚರಿ ಕ್ರೀಡೆಯಲ್ಲಿ ಸಂಚಲನ ಸೃಷ್ಟಿ ಮಾಡಿದ ಮ್ಯಾಟ್ ರ ವಿಡಿಯೋಗಳನ್ನ ಶೀತಲ್ ಗೆ ತೋರಿಸಿ ಕೋಚಿಂಗ್ ಶುರುಮಾಡಲಾಯಿತು.
ಶೀತಲ್ ದೇವಿಯಂತೆಯೇ ಶ್ರೇಷ್ಠ ಬಿಲ್ಲುಗಾರ ಎಂಬ ವಿಶ್ವ ದಾಖಲೆಯ ಮೂಲಕ 210 ಮೀ. ದೂರದ ಗುರಿಯನ್ನು ನಿಖರವಾಗಿ ಹೊಡೆದ, ಅಮೇರಿಕಾದ ಮ್ಯಾಟ್ ರ ಸಾಧನೆ ಗಮನಿಸಬೇಕಾದದ್ದೇ. ಟ್ರಸ್ಟ್ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದ ಮ್ಯಾಟ್, ತನ್ನ ಎರಡೂ ಕೈಗಳಿಲ್ಲದಿದ್ದರೂ ಜಿಂಕೆ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾ, ಮುಂದೆ ಇದನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು ಕೈ ಇರೋರೊಂದಿಗೆ ಆರ್ಚರಿ ಸ್ಪರ್ಧೆಗಿಳಿದು ಸೋಲಿಸಿದ ಮ್ಯಾಟ್ ರ ಸಾಧನೆಯೂ ಶೀತಲ್ ದೇವಿ ಸಾಧನೆಯತೆಯೇ ಮೆಚ್ಚುವಂತದ್ದು.
2024 ರಲ್ಲಿ ನಡೆದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಜೋಡಿಯಾಗಿ ರಾಕೇಶ್ ಕುಮಾರ್ ಮತ್ತು ಶೀತಲ್ ದೇವಿ ಇಟಲಿಯ ಎಲೆನೊರ ಸರ್ತಿ ಮತ್ತು ಮ್ಯಾಟಿಯೊ ಬೊನ್ನಾಸಿನಾ ವಿರುದ್ಧ ಮಿಶ್ರ ಟೀಮ್ ಕೌಂಪೌಂಡ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಅಲ್ಲದೆ 2022ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಎರಡು ಚಿನ್ನದ ಪದಕ, ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ತಮ್ಮ ಹೆಗಲೇರಿಸಿಕೊಂಡಿದ್ದಾರೆ. ಭಾರತದ ಅತ್ಯಂತ ಕಿರಿಯ ಪ್ಯಾರಾಲಂಪಿಯನ್ ಪದಕ ವಿಜೇತರಾಗುವುದಲ್ಲದೆ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಧಿಸುವಾತನಿಗೆ ಛಲವೊಂದಿದ್ದರೆ ಭೂಮಿಯನ್ನೇ ಎತ್ತಿ ಆಡಿಸಬಲ್ಲ, ಎಂಬುದಕ್ಕೆ ನೈಜ ಉದಾಹರಣೆಯೇ ಶೀತಲ್ ದೇವಿ. ಮೊಬೈಲ್ ಯುಗದಿಂದಾಗಿ ಸಾಧಿಸುವಾತ ಎಲ್ಲೋ ಮೂಲೆಯಲ್ಲಿ ಕುಳಿತುಕೊಂಡಿದ್ದಾನಷ್ಟೇ… ಕಣ್ತೆರೆದು ಜಗತ್ತನ್ನು ನೋಡಿದರೆ ಸಾಧಿಸುವಂಥದ್ದು ಸಾವಿರದಷ್ಟಿದೆ…
- ಬರಹ: ಹಂಸಿ ವಿಟ್ಲ
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು